ಯೋಗಿ ಆದಿತ್ಯನಾಥರ ಆಡಳಿತದಲ್ಲಿ ಉತ್ತರಪ್ರದೇಶ ‘ಜಂಗಲ್ ನ್ಯಾಯ’ ಕಡೆ ಮುಖ ಮಾಡುತ್ತಿದೆಯೇ? ನಗರವೊಂದರ ಏರಿಯಾದ ಎಲ್ಲ ಮನೆಗಳ ಹೊರ ಗೋಡೆಗಳಿಗೆ ಕೆಲವು ಮನೆಹಾಳರು ಆ ಮನೆಯವರ ವಿರೋಧ ಲೆಕ್ಕಿಸದೇ ಕೇಸರಿ ಬಣ್ಣ ಬಳಿದು ವಿಕಾರಗೊಳಿಸಿದ್ದಾರೆ.

ಪ್ರಗ್ಯಾನಗರ(ಯುಪಿ): ತಮ್ಮ ಮನೆಯ ಗೋಡೆಗಳಿಗೆ ಒತ್ತಾಪೂರ್ವಕವಾಗಿ ಕೆಲವರು ಕೇಸರಿ ಬಣ್ಣ ಬಳಿದು ವಿಕಾರಗೊಳಿಸಿದ್ದಾರೆ. ನಾವು ಎಷ್ಟೇ ವಿರೋಧಿಸಿದರೂ ಬೆದರಿಕೆ ಹಾಕಿ ಹಲವಾರು ಮನೆಗಳಿಗೆ ಕೇಸರಿ ಪೇಂಟಿಂಗ್ ಮಾಡಿದ್ದಾರೆ ಎಂದು ಪ್ರಗ್ಯಾ ನಗರದ ವ್ಯಾಪಾರಿ ರಾಜ್ ಗುಪ್ತಾ ಎಫ್ಐಆರ್ ದಾಖಲಿಸಿದ್ದಾರೆ.
ಅದೇ ಸಾಲಿನಲ್ಲಿ ಉತ್ತರಪ್ರದೇಶ ಸರ್ಕಾರದ ಸಚಿವ ನಂದ್ ಗೋಪಾಲ್ ನಂದಿಯವರ ಮನೆಯಿದ್ದು, ಅವರು ಈ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು, ಅದರಲ್ಲಿ ತಪ್ಪೇನೂ ಇಲ್ಲ. ಅದು ಅಭಿವೃದ್ಧಿ ಕೆಲಸ. ವಿವಾದ ಅನಗತ್ಯ. ಎಫ್ಐಆರ್ ಹಿಂದೆ ಸಂಚಿದೆ ಎಂದಿದ್ದಾರೆ.
ಎಫ್ಐಆರ್ ನಲ್ಲಿ ಕಮಲ್ ಕುಮಾರ್ ಕೇಸರ್ ವಾಣಿ ಪ್ರಮುಖ ಆರೋಪಿಯಾಗಿದ್ದು, ಈತ ಸಚಿವ ನಂದ್ ಗೋಪಾಲ್ ನಂದಿಯವರ ಕಸಿನ್.

ಎಫ್ಐಆರ್ ದಾಖಲಿಸಿರುವ ರಾಜ್ ಗುಪ್ತಾ ಮಾತನಾಡಿ, ನನ್ನ ಸಾಂವಿಧಾನಿಕ ಹಕ್ಕಿಗೆ ಆ ಪುಂಡರ ಗುಂಪು ಧಕ್ಕೆ ತಂದಿದೆ. ಚೆಂದವಾಗಿದ್ದ ಮನೆಯ ಹೊರಗೋಡೆಯನ್ನು ವಿಕಾರಗೊಳಿಸಿದ್ದಾರೆ. ಅವರ ವಿಕಾರ ಬುದ್ಧಿಗೆ ಧಿಕ್ಕಾರ. ಈ ಓಣಿಯಷ್ಟೇ ಅಲ್ಲ, ಪ್ರಗ್ಯಾ ನಗರದ ಹಲವು ಓಣಿಗಳಲ್ಲಿ ಹೀಗೇ ಮನೆಗಳಿಗೆ ಕೇಸರಿ ಬಣ್ಣ ಬಳಿದು ವಿಕಾರಗೊಳಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ ಗುಪ್ತಾ ತಮ್ಮ ಮನೆಯ ಬಾಲ್ಕನಿ ಮೇಲೆ ನಿಂತು ಮಾಡಿರುವ ವಿಡಿಯೋದಲ್ಲಿ ಸಾಲಸಾಲು ಮನೆಗಳಿಗೆ ಕೇಸರಿ ಬಣ್ಣ ಬಳಿದಿದ್ದನ್ನು, ಜನರು ವಿರೋಧಿಸಿದ್ದನ್ನು ಕಾಣಬಹುದು. ಹಾಗೆಯೇ ಒಬ್ಬ ವ್ಯಕ್ತಿ, ‘ನಂದಿ ಸಾಹೇಬರ (ಸಚಿವರು) ಸೂಚನೆ ಮೇರೆಗೆ ಈ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳುತ್ತಿರುವುದನ್ನು ಗಮನಿಸಬಹುದು.