ಗದಗ: ಕೃಷಿ ಹಾಗೂ ಹವಾಮಾನ ಸಂಬಂಧಿತ ಆ್ಯಪ್‌ಗಳು
ಇತ್ತೀಚಿಗೆ ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿದೆ. ಬರ, ಅಕಾಲಿತ ಮಳೆ, ಕೀಟ-ರೋಗದ ಬಾಧೆ, ಪ್ರವಾಹ, ಉಷ್ಣಾಂಶದಲ್ಲಿ ಏರಿಳಿತ ಮುಂತಾದ ಪ್ರಕೃತಿ ವಿಕೋಪಕಗಳು ಕೃಷಿ ವ್ಯವಸ್ಥೆಯನ್ನು ಅಭದ್ರಗೊಳಿಸುತ್ತಿವೆ. ಹವಾಮಾನದ ಮುನ್ಸೂಚನೆಯ ಮಾಹಿತಿ ಕೊರತೆಯಿಂದ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವದು ಸಾಧ್ಯವಾಗುತ್ತಿಲ್ಲ. ಹವಾಮಾನದ ವೈಪರೀತ್ಯದಿಂದಾಗುವ ಪರಿಣಾಮಗಳನ್ನು ಎದುರಿಸಲು ಭಾರತೀಯ ಹವಾಮಾನ ಇಲಾಖೆ, ಭಾರತೀಯ ಕೃಷಿ ಸಂಶೋಧನ ಮಂಡಳಿ, ನವ ದೆಹಲಿ ಹಾಗೂ ಭೂ ವಿಜ್ಞಾನ ಸಚಿವಾಲಯ, ನವ ದೆಹಲಿ ಇವರು “ಮೇಘದೂತ” ಹಾಗೂ “ದಾಮಿನಿ” ಎಂಬ ಎರಡು ಆ್ಯಪ್‌ಗಳನ್ನು ರೂಪಿಸಿ ಬಿಡುಗಡೆಮಾಡಿದ್ದಾರೆ. ಈ ಆ್ಯಪ್‌ಗಳನ್ನು ರೈತರು ತಮ್ಮ ಸ್ಮಾರ್ಟ್ ಫೋನಿನ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಹವಾಮಾನ ಮುನ್ಸೂಚನೆ, ಹವಾಮಾನ ಆಧಾರಿತ ಕೃಷಿ ಸಲಹೆಗಳು ಹಾಗೂ ಮಿಂಚು-ಗುಡುಗಿನ ಮಾಹಿತಿಯನ್ನು ಪಡೆಯಬಹುದು. ಆ್ಯಪ್‌ಗಳ ವಿವರವಾದ ಮಾಹಿತಿ ಈ ಕೆಳಗಿನಂತಿದೆ.
ಮೇಘದೂತ ಆ್ಯಪ್
ಈ ಆ್ಯಪ್ ರೈತರಿಗೆ ಮತ್ತು ಆಸಕ್ತ ಬಳಕೆದಾರರಿಗೆ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಒದಗಿಸುತ್ತದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಜಿಲ್ಲಾ ಕೃಷಿ ಹವಾಮಾನ ಘಟಕದಿಂದ ಮಾಹಿತಿಯನ್ನು ನವೀಕರಿಸಲಾಗುತ್ತದೆ. ಈ ಆ್ಯಪ್ ಮಾಹಿತಿ ಕೇವಲ ಕೃಷಿ ಮತ್ತು ತೋಟಗಾರಿಕೆಗಷ್ಟೆ ಸೀಮಿತವಾಗದೇ ಹೈನುಗಾರಿಕೆಯ ಮಾಹಿತಿಯನ್ನೂ ಒಳಗೊಂಡಿದೆ. ಋತುವಿಗನುಸಾರವಾಗಿ ಕುರಿ, ಕೋಳಿ ಮತ್ತು ಇತರ ಜಾನುವಾರುಗಳಿಗೆ ತಗಲುವ ಕಾಯಿಲೆ ಹಾಗೂ ಅವುಗಳ ಹತೋಟಿ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
ರೈತರು ಆ್ಯಪ್‌ನಲ್ಲಿ ತಮ್ಮ ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆಯನ್ನು ನಮೂದು ಮಾಡಿ ನೋಂದಾಯಿಸಬೇಕು. ನಂತರ ನೋಂದಾಯಿತ ಬಳಕೆದಾರರು ಆಯಾ ಜಿಲ್ಲೆಯ ನಿರ್ದಿಷ್ಟ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳ ಮಾಹಿತಿಗಳನ್ನು ಪಡೆಯಬಹುದು.
ಹವಾಮಾನ ಮುನ್ಸೂಚನೆ ಆಧಾರಿಸಿ ಜಿಲ್ಲಾವಾರು ಪ್ರಮುಖ ಬೆಳೆಗಳಿಗೆ ವಿವಿಧ ಹಂತಗಳಲ್ಲಿ ಪ್ರಚಲಿತ ಹವಾಮಾನದಿಂದ ಬೆಳೆಗಳ ಮೇಲಾಗುವ ಪರಿಣಾಮಗಳ ಬಗ್ಗೆ ಹಾಗೂ ಅದಕ್ಕನುಗುಣವಾಗಿ ಅವುಗಳಿಗೆ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಲಭ್ಯವಿರುತ್ತದೆ.
ದಾಮಿನಿ ಆ್ಯಪ್
ನೈಸರ್ಗಿಕ ಕಾರಣಗಳಿಂದ ಉಂಟಾಗುವ ಆಕಸ್ಮಿಕ ಸಾವುಗಳಲ್ಲಿ ಶೇ.25 ರಷ್ಟು ಅಸಾಮಾನ್ಯ ಹವಾಮಾನ ಘಟನೆಗಳಿಂದ ಸಂಭವಿಸುತ್ತವೆ. ವಿಶೇಷವಾಗಿ ಸಿಡಿಲಿನ ಹೊಡೆತದಿಂದ ಅಪಾರ ಪ್ರಮಾಣದ ಸಾವು ನೋವು ಮತ್ತು ಆಸ್ತಿಪಾಸ್ತಿಗಳ ನಷ್ಟ ಆಗುತ್ತಿದೆ. ದೇಶದಲ್ಲಿ ಪ್ರತಿ ವರ್ಷ ಸರಾಸರಿ 2,500 ಜನರು ಸಿಡಿಲಿನಿಂದ ಸಾವನ್ನಪ್ಪುತ್ತಿದ್ದಾರೆ. ಹೆಚ್ಚಿನವರು ಹೊಲದಲ್ಲಿ ಉಳುಮೆ ಮಾಡುವ ರೈತರು, ದನಕರುಗಳ ಪಾಲಕರು ಮತ್ತು ಕುರಿಗಾರರು ಸೇರಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಾವು ನೋವಿನ ಪ್ರಕರಣಗಳು ದಾಖಲಾಗಿವೆ. ಈ ಅನಾಹುತಗಳನ್ನು ತಡೆಯುವ ದಿಶೆಯಲ್ಲಿ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆಯು ಭಾರತ ಸರಕಾರದ ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸುಮಾರು 48 ಸಿಡಿಲು ಪತ್ತೆ ಸಂವೇದಕಗಳನ್ನು ಸ್ಥಾಪಿಸಿದೆ. ಎಲ್ಲಾ ಸಂವೇದಕಗಳು ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯ ಕೇಂದ್ರ ಸಂಸ್ಕರಣಾ ಘಟಕಕ್ಕೆ ಸಂಪರ್ಕ ಹೊಂದಿವೆ.
ಈ ಸಂವೇದಕಗಳು ಗುಡುಗು ಸಹಿತ ಸಿಡಿಲಿನ ಹೊಡೆತ ಚಲನೆಯ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. ಈ ಆ್ಯಪ್ ಪ್ರಸ್ತುತ ಸಿಡಿಲಿನ ಹೊಡೆತಗಳ ನಿಖರವಾದ ಸ್ಥಳಗಳನ್ನು ಗುರುತಿಸುತ್ತದೆ ಮತ್ತು ನಮ್ಮ ಸುತ್ತಮುತ್ತಲಿನ 20 ರಿಂದ 40 ಚದರ ಕಿ.ಮಿ ವರೆಗೆ ಸಂಭವನೀಯ ಗುಡುಗು ಸಹಿತ ಮಿಂಚಿನ ಚಲನೆಯ ಬಗ್ಗೆ ಕನಿಷ್ಠ 30 ರಿಂದ 45 ನಿಮಿಷಗಳ ಮೊದಲೇ ಎಚ್ಚರಿಕೆ ನೀಡುತ್ತದೆ. ಸ್ಮಾರ್ಟ ಫೋನ್ ಉಪಯೋಗಿಸುವ ಎಲ್ಲ ರೈತರು ಪ್ಲೆಸ್ಟೋರ್ ನಲ್ಲಿ ಇಂಗ್ಲೀಷ್‌ನಲ್ಲಿ ದಾಮಿನಿ ಎಂದು ಟೈಪ್ ಮಾಡಿ ಆ್ಯಪ್ ಡೌನಲೋಡ್ ಮಾಡಿಕೊಂಡು ತಮ್ಮ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಪಿನ್‌ಕೋಡ ಮತ್ತು ಉದ್ಯೋಗವನ್ನು ನಮೂದು ಮಾಡಿ ನೋಂದಾಯಿಸಬೇಕು. ನಂತರ ನೋಂದಾಯಿತ ಬಳಕೆದಾರರು ಆಯಾ ಪ್ರದೇಶದ ಮಿಂಚಿನ ಮುನ್ಸೂಚನೆ ಮತ್ತು ಎಚ್ಚರಿಕೆಯ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಹಿರಿಯ ವಿಜ್ಞಾನಿಗಳು ಹಾಗೂ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎಲ್.ಜಿ.ಹಿರೇಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.