ಚಿಕ್ಕಬಳ್ಳಾಪುರ: ನಮ್ಮ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದವರಿಗೆ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ. ಎಂಟು ತಿಂಗಳ ರಾಜಕೀಯ ಗ್ರಹಣದ ಬಳಿಕ ಸಚಿವರಾದ ನಮ್ಮನ್ನು ಪ್ರತಿಪಕ್ಷದ ಕೆಲವರು ಲೇವಡಿ ಮಾಡಿದ್ದರು. ಇವರು ಏನು ಮಾಡುತ್ತಾರೋ ನಾವು ನೋಡುತ್ತೇವೆ ಎಂದು ಟೀಕೆಗಳ ಸುರಿಮಳೆ ಗೈದಿದ್ದರು. ಈಗ ಅವರಿಗೆಲ್ಲ ಉತ್ತರ ಸಿಕ್ಕಿರಬೇಕು ಎಂದು ಭಾವಿಸಿದ್ದೇನೆ ಎಂದರು.


ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊವಿಡ್ ಸಂಕಷ್ಟದ ಸಮಯದಲ್ಲಿ ಹೊಸದಾಗಿ ಸಚಿವರಾದ ನಾವು ಹಗಲು ರಾತ್ರಿ ಲೆಕ್ಕಿಸದೇ ದುಡಿಯುತ್ತಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರೂ ಕಷ್ಟಪಟ್ಟು ಅತ್ಯಂತ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಇದರಿಂದ ಸರ್ಕಾರಕ್ಕೂ ಒಳ್ಳೆಯ ಹೆಸರು ಬಂದಿದೆ ಎಂದರು.
ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಗುಂಪುಗಳಿಗೆ ನೀಡುತ್ತಿರುವಂತೆ ಆಶಾ ಕಾರ್ಯಕರ್ತೆಯರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು. ಕಳೆದ ಮೂರ್ನಾಲ್ಕು ತಿಂಗಳಿಂದ ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿ ಕಡಿತ ಮಾಡಿ ಸಾಲ ನೀಡಲಾಗುತ್ತಿದೆ. ಈ ಸಂಬಂಧ ಹೊರಡಿಸಿರುವ ಆದೇಶವನ್ನು ಹಿಂದೆ ಪಡೆಯಬೇಕು ಎಂದು ಸಹಕಾರ ಸಚಿವರನ್ನು ಇದೇ ಸಂದರ್ಭದಲ್ಲಿ ಸಚಿವ ಸುಧಾಕರ್ ಒತ್ತಾಯಿಸಿದರು.


ಕೋಲಾರ ಡಿಸಿಸಿ ಬ್ಯಾಂಕ್ ಹಾಗೂ ಕೋಲಾರ ಹಾಲು ಒಕ್ಕೂಟವನ್ನು ವಿಭಾಗಿಸಿ ನೂತನವಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟ ಅಸ್ತಿತ್ವಕ್ಕೆ ತರಬೇಕು. ಡಿಸಿಸಿ ಬ್ಯಾಂಕಿನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಸಚಿವರಲ್ಲಿ ಅವರು ಮನವಿ ಮಾಡಿದರು.


ಜಿಲ್ಲೆ ಕೃಷಿ ಪ್ರಧಾನ ಪ್ರದೇಶವಾಗಿದ್ದು, ತೋಟಗಾರಿಕೆ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ, ದ್ರಾಕ್ಷಿ ಮತ್ತಿತರೆ ತೋಟಗಾರಿಕೆ ಬೆಳೆಗಳ ಜೊತೆಗೆ ಹೂವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಬೆಳೆಗಾರರಿಗೆ ನೆರವು ನೀಡುವ ನಿಟ್ಟಿನಲ್ಲಿ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸುವ ಅವಶ್ಯಕತೆ ಇದೆ ಎಂದರು.
ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಅತ್ಯುತ್ತಮ ಮಟ್ಟದಲ್ಲಿ ಕಾರ್ಯನಿರ್ವಹಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಇದಕ್ಕೆ ಕಾರಣ ಎಂದರು.
ವಿಶೇಷ ಅವಕಾಶ ಸಾಧ್ಯವಿಲ್ಲ: ಪ್ರದೇಶ ಕಾಂಗ್ರೆಸ್ ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕರೋನಾ ಹಿನ್ನೆಲೆಯಲ್ಲಿಸರ್ಕಾರ ಕೆಲ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ, ರಾಜಕೀಯ ಸಭೆ ಸಮಾರಂಭಗಳಿಗೆ ಅವಕಾಶ ನೀಡುತ್ತಿಲ್ಲ. ಇಲ್ಲಿ ನಾವಿಬ್ಬರು ಸಚಿವರು ಇದ್ದುಕೊಂಡೇ ಕೇವಲ ಐನೂರು ಜನರಿಗೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಶಿವಕುಮಾರ್ ಅವರಿಗೆ ವಿಶೇಷವಾಗಿ ಅವಕಾಶ ನೀಡಲು ಆಗುವುದಿಲ್ಲ ಎಂದರು.
ಅದಾಲತ್: ನಗರದ ಕಂದವಾರ ಕೆರೆ ಆವರಣದಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಅದಾಲತ್ ನಡೆಸಿದ ಸಚಿವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸದ ಬಿ.ಎನ್.ಬಚ್ಚೇಗೌಡ, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಎಸ್.ಎನ್.ಸುಬ್ಬಾರೆಡ್ಡಿ, ಜಿ.ಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ರವಿಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರು, ಸಹಕಾರಿ ಧುರೀಣರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಸಾಲಕ್ಕೆ ಹೆದರಿ ನೇಣಿಗೆ ಶರಣಾದ..!

ಉತ್ತರಪ್ರಭ ಸುದ್ದಿ ಕೊಪ್ಪಳ: ತಾಲೂಕಿನ ಲೆಬಗೇರಿ ಗ್ರಾಮದ ನಾಗರಾಜ (೩೫) ಜಡಿಯಪ್ಪ ಚಿಲವಾಡಗಿ ಎಂಬಾತನು ಬ್ಯಾಂಕ್…

ಹೂವು ಮಾರಿ ಬದುಕು ಕಟ್ಟಿಕೊಂಡವನ ಹೂ ಮನಸ್ಸು

ರೋಣ: ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ, ಕೊಟ್ಟು ಕೆಟ್ಟಿತೆನಬೇಡ, ಕೊಟ್ಟು ಕುದಿಯಲು ಬೇಡ, ಕೊಟ್ಟು ಹಂಗಿಸಬೇಡ… ಹೀಗೆ ದಾನದ ಬಗ್ಗೆ ೧೨ನೇ ಶತಮಾನದಲ್ಲಿ ಶರಣರು ಸಾರಿ ಹೇಳಿದ್ದಾರೆ. ಆದರೆ ಪಟ್ಟಣದ ವ್ಯಕ್ತಿಯೊಬ್ಬರು ದುಡಿದ ಬೆವರಿನ ಫಲದಲ್ಲಿ ಸಂಕಷ್ಟದಲ್ಲಿರುವವರಿಗೆ, ನೊಂದವರಿಗೆ ನೆರವು ನೀಡಿ, ಶರಣರ ನಿಜ ನಡೆಯನ್ನು ಪಾಲಿಸುವ ಮೂಲಕ ಮಾದರಿಯಾಗಿದ್ದಾರೆ.

ಜೈಲಿನಲ್ಲಿ ಇದ್ದುಕೊಂಡೇ ಅಪಹರಣಕ್ಕೆ ಸಂಚು!

ಪರಪ್ಪನ ಅಗ್ರಹಾರದಿಂದಲೇ ಕಿಡ್ನಾಪ್ಗೆ ಸಂಚು ರೂಪಿಸಿ, ತನ್ನ ಚೇಲಾಗಳ ಮೂಲಕ ಅದನ್ನು ಕಾರ್ಯರೂಪಕ್ಕೆ ತಂದಿದ್ದಾನೆ ಬೋಂಡ ಮಂಜ.

ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ : 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Two Day Heavy Rains in the State: Yellow Alert in 6 Districts