ಬೆಂಗಳೂರು: ಲಾಕ್ ಡೌನ್ ಹಿನ್ನೆಲೆ ಮಾ.23 ರಿಂದ ನಗರದಲ್ಲಿ ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಿತ್ತು. ಈಗಾಗಲೇ ಮಾರ್ಚ್ ಹಾಗೂ ಏಪ್ರೀಲ್ ತಿಂಗಳ ಸಂಬಳ ನೀಡಲಾಗಿದೆ. ಆದರೆ ಮೇ ತಿಂಗಳ ಸಂಬಳವೇ ಸಿಬ್ಬಂಧಿಗಳಲ್ಲಿ ಆತಂಕ ಮೂಡಿಸಿದೆ. ಮೇ.18, 2020 ರ ಸಂಬಳವನ್ನು ಮಾತ್ರ ಪರಿಗಣಿಸಿದ್ದು, ಬಾಕಿ ಉಳಿದ ದಿನಗಳ ಸಂಬಳದ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ದೇಶಕರು ಆದೇಶಿಸಿದ್ದಾರೆ.
ಆದೇಶದಲ್ಲಿ ಏನಿದೆ..?
- ದಿನಾಂಕ 18-05-2020 ರಿಂದ ಸಂಸ್ಥೆಯ ವಾಹನ ಕಾರ್ಯಾಚರಣೆಯನ್ನು ಪ್ರಾರಂಭಿಸಿರುವುದರಿಂದ ಈ ದಿನಾಂಕದಿಂದ ವಾಸ್ತವಿಕ ಹಾಜರಾತಿಗನುಗುಣವಾಗಿ ಮೇ.2020ರ ಮಾಹೆಯ ವೇತನಕ್ಕೆ ಪರಿಗಣಿಸುವುದು.
- ದಿನಾಂಕ 01-05-2020 ರಿಂದ ದಿನಾಂಕ 17-05-2020ರ ವರೆಗಿನ ಅವಧಿಗೆ ಸರ್ಕಾರವೂ ಮುಂದೇ ತೆಗೆದುಕೊಳ್ಳಬಹುದಾದ ತೀರ್ಮಾನಕ್ಕೆ ಒಳಪಟ್ಟಂತೆ ಎಲ್ಲ ಅರ್ಹ ನೌಕರರಿಗೆ ಮೇ.2020ರ ಮಾಹೆಯ ವೇತನಕ್ಕೆ ಪರಿಗಣಿಸುವುದು.
- ದಿನಾಂಕ 29-02-2020ರ ಪೂರ್ವದಲ್ಲಿ ದಿರ್ಘಾವಧಿ ಗೈರು ಹಾಜರಿಯಲ್ಲಿದ್ದು, ದಿನಾಂಕ 17-05-2020ರ ನಂತರ ಮೇ.2020ರ ಮಾಹೆಯಲ್ಲಿ ಕರ್ತವ್ಯಕ್ಕೆ ಹಾಜರಾದಲ್ಲಿ ಹಾಜರಾದ ನಂತರ ವಾಸ್ತವಿಕ ಹಾಜರಾತಿಗನುಗುಣವಾಗಿ ಮೇ.2020ರ ಮಾಹೆಯ ವೇತನಕ್ಕೆ ಪರಿಗಣಿಸುವುದು.
- ಮಾರ್ಚ್ 2020ರ ಮಾಹೆಯಲ್ಲಿ ಕೆಲವು ದಿನಗಳ ಕಾಲ ಕರ್ತವ್ಯ ನಿರ್ವಹಿಸಿ ದಿನಾಂಕ 23-03-2020ರಂದು ಇದ್ದಂತೆ ಏಳು ದಿನಗಳಿಗೆ ಮೀರದಂತೆ ದಿರ್ಘಕಾಲದ ಗೈರು ಹಾಜರಿಯಲ್ಲಿಯೇ ಉಳಿದು ದಿನಾಂಕ 18-05-2020ರಿಂದ ದಿನಾಂಕ 31-05-2020ರ ವರೆಗಿನ ಅವಧಿಯಲ್ಲಿಯೂ ಸಹ ಗೈರು ಹಾಜರಿಯಲ್ಲಿ ಮುಂದುವರೆದರೆ ಇಂತಹ ಪ್ರಕರಣಗಳಲ್ಲಿ ಮೇ.2020ರ ಮಾಹೆಯ ವೇತನಕ್ಕೆ ಪರಿಗಣಿಸುವಂತಿಲ್ಲ. ಆದರೆ ದಿನಾಂಕ 18-05-2020 ರಿಂದ 31-05-2020ರ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಾದಲ್ಲಿ ದಿನಾಂಕ 01-05-2020 ರಿಂದ ದಿನಾಂಕ 17-05-2020ರ ವರೆಗಿನ ಅವಧಿಗೆ ಮೇಲ್ಕಂಡ ಕ್ರಮ ಸಂಖ್ಯೆ 2ರನ್ವಯ ವೇತನಕ್ಕೆ ಪರಿಗಣಿಸುವುದು. ಉಳಿದಂತೆ ದಿನಾಂಕ 18-05-2020 ರಿಂದ 31-05-2020ರ ವರೆಗಿನ ಅವಧಿಗೆ ವಾಸ್ತವಿಕ ಹಾಜರಾತಿಗನುಗುಣವಾಗಿ ಮೇ.2020ರ ಮಾಹೆಯ ವೇತನ ಪಾವತಿಸುವುದು.
- ಪ್ರಸ್ತುತ ಅಮಾನತ್ತು ಆದೇಶದಲ್ಲಿ ಮುಂದುವರೆದ ನೌಕರರು ಜೀವನ ನಿರ್ವಹಣಾ ಬತ್ತೆಗೆ ಅರ್ಹರಿರುತ್ತಾರೆ.
- 01-03-2020 ರಿಂದ 22-03-2020ರ ಅವಧಿಗೆ ಪೂರ್ಣ ಹಾಜರಾತಿ ಎಂದು ಪರಿಗಣಿಸಿ ಈಗಾಗಲೇ ವೇತನ ಪಾವತಿಸಿದ್ದು ಇದನ್ನು ವಾಸ್ತವಿಕ ಹಾಜರಾತಿಗನುಗುಣವಾಗಿ ವೇತನ ಸರಿದೂಗಿಸುವ ಬಗ್ಗೆ ಮುಂದೆ ತಿಳಿಸಲಾಗುವುದು.

ಆದೇಶದ ಬಗ್ಗೆ ಸಿಬ್ಬಂಧಿ ಹೇಳುವುದೇನು..?
- ಈಗಾಗಲೇ ಲಾಕ್ ಡೌನ್ ಹಿನ್ನೆಲೆ ತಮ್ಮ ಊರುಗಳಿಗೆ ತೆರಳಿದ ಸಿಬ್ಬಂಧಿಗಳು ಮೇ.18ರಿಂದ ಕರ್ತವ್ಯಕ್ಕೆ ಹಾಜರಾಗುವುದು ಒಮ್ಮಿಂದೊಮ್ಮೆಲೆ ಹೇಗೆ ಸಾಧ್ಯ? ಈ ವೃತ್ತಿಯನ್ನೆ ನಂಬಿಕೊಂಡು ನಮ್ಮ ಕುಟುಂಬಗಳಿರುವುದರಿಂದ ಈ ಹಿಂದಿನಂತೆಯೇ ಮೇ ತಿಂಗಳ ಸಂಬಳವನ್ನು ಪರಿಗಣಿಸಬೇಕು.
- ಒಂದುಕಡೆ ಸರ್ಕಾರವೇ ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರ ರಕ್ಷಣೆಯ ಬಗ್ಗೆ ಮಾತನಾಡುತ್ತದೆ. ಜೊತೆಗೆ ಉದ್ಯೋಗದ ಭದ್ರತೆ ಬಗ್ಗೆಯೂ ಹೇಳುತ್ತದೆ. ಹೀಗಿದ್ದಾಗ್ಯೂ ನಮ್ಮ ವೇತನದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಇಷ್ಟು ವಿಳಂಬವೇಕೆ? ತಿಂಗಳ ಸಂಬಳ ಬಂದರೆ ಅನುಕೂಲವಲ್ಲವೇ?
- ಇಲಾಖೆಯ ಆದೇಶದ ನಾಲ್ಕನೇ ಅಂಶ ಏಳು ದಿನಗಳ ದಿರ್ಘಕಾಲದ ರಜೆಯ ಬಗ್ಗೆ ಪ್ರಾಸ್ತಾಪಿಸಿದೆ. ಆದರೆ ಈ ಬಗ್ಗೆಯೂ ಗೊಂದಲವಿದೆ. ಕಾರಣ ಒಂದು ವೇಳೆ ಸಿಬ್ಬಂಧಿಗಳು ಸೀಲ್ ಡೌನ್ ಏರಿಯಾದಲ್ಲಿದ್ದರೇ? ಅಥವಾ ಕ್ವಾರಂಟೈನ್ ನಲ್ಲಿದ್ದರೆ, ಇಲ್ಲವೇ ಅವರಿಗೆ ಬೆಂಗಳೂರಿಗೆ ಬರಲು ಅನಾನುಕೂಲಗಳಾಗಿದ್ದರೆ ಹೇಗೆ? ಈ ಬಗ್ಗೆ ಸ್ಪಷ್ಟತೆ ಇಲ್ಲ.
- ಇಲಾಖೆ ಆದೇಶದಲ್ಲಿ ಕೊನೆಯ ಅಂಶದಲ್ಲಿ ಸೂಚಿಸಿರುವಂತೆ ಮಾರ್ಚ್ ತಿಂಗಳ ವೇತನ ನೀಡಿರುವ ಬಗ್ಗೆ ಮತ್ತು ವಾಸ್ತವಿಕ ಹಾಜರಾತಿಗನುಗುಣವಾಗಿ ಸರಿದೂಗಿಸುವ ಬಗ್ಗೆ ಪ್ರಾಸ್ತಾಪಿಸಿದ್ದು ಸಿಬ್ಬಂಧಿಗಳಿಗೆ ವೇತನ ಕಡಿತದ ಭಯ ಕಾಡುತ್ತಿದೆ.