ಗದಗ: ನಾಳೆ ಗದಗ ನಗರಕ್ಕೆ ಮುಂಬೈ-ಗದಗ ಎಕ್ಸ್‌ಪ್ರೆಸ್ ರೈಲು ಆಗಮಿಸಲಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಹೇಳಿದರು.
ಈ ಕುರಿತು ಗದಗನಲ್ಲಿ ಮಾತನಾಡಿದ ಅವರು ನಮ್ಮ ರಾಜ್ಯದ ಜನ ಮುಂಬೈನಲ್ಲಿ ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ಮುಂಬೈ ಕನ್ನಡಿಗರನ್ನು ಅನಿವಾರ್ಯವಾಗಿ ಕರೆಸಿಕೊಳ್ಳಬೇಕಿದೆ ಎಂದರು.
ಎಷ್ಟು ಜನ ಮುಂಬೈನಿಂದ ಬರ್ತಾರೆ ಎಂಬ ಸ್ಪಷ್ಟ ಮಾಹಿತಿ ಬಂದಿಲ್ಲ. ನಾಳೆ ಬೆಳಿಗ್ಗೆ 11 ಗಂಟೆ ನಂತರ ಗದಗ ನಿಲ್ದಾಣಕ್ಕೆ ಮುಂಬೈ ರೈಲು ಬರಲಿದೆ. ಬಂದವರನ್ನು ಗದಗ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಿ ಮುಂಬೈ ಕನ್ನಡಿಗರನ್ನು 7 ದಿನ ಕ್ವಾರಂಟೈನ್ ಮಾಡಲಾಗುತ್ತದೆ.
ಮುಂಬೈ ನಿಂದ ಗದಗ ಜಿಲ್ಲೆಗೆ ನಿರೀಕ್ಷೆ ಮೀರಿ ಜನ ಬಂದರೂ ಕ್ವಾರಂಟೈನ್ ಮಾಡುತ್ತೇವೆ. ಪ್ರಯಾಣಿಕರಿಗೆ ಯಾವುದೇ ಅನಾನುಕೂಲ ಆಗದಂತೆ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ಜಿಲ್ಲಾ ಕೇಂದ್ರದಲ್ಲಿ ಕ್ವಾರಂಟೈನ್ ಕೇಂದ್ರಗಳು ಸಾಕಾಗದಿದ್ದರೆ ತಾಲೂಕ ಕೇಂದ್ರಗಳಿಗೂ ಕಳುಹಿಸಿ ಕೊಡಲಾಗುವುದು ಎಂದರು.