ಬೆಂಗಳೂರು: ಇತ್ತಿಚಿನ ಕೊರೋನಾ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ ಹಳ್ಳಿ ಕಡೆಗೆ ನನ್ನ ನಡಿಗೆ ಎಂದು ಕೊರೋನಾ ಹೇಳುವಂತಿದೆ.
ಮೊದಲ ಮೂರು ಹಂತದ ಲಾಕ್ ಡೌನ್ ವೇಳೆ, ನಗರಗಳಿಗೆ ಸೀಮಿತವಾಗಿದ್ದ ಸೋಂಕು ಇದೀಗ
ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಹಳ್ಳಿಗಳತ್ತ ದಾಳಿ ಇಟ್ಟಿದೆ.
ಎರಡನೇ ಹಂತದ ಲಾಕ್ ಡೌನ್ ವೇಳೆ ಸೋಂಕಿನ ಪ್ರಮಾಣ ಶೇ.2.1ರಷ್ಟು ಇದ್ದದ್ದು, ಮೂರನೇ ಹಂತದ ಲಾಕ್ ಡೌನ್ ವೇಳೆ 3.5 ಕ್ಕೆ ಏರಿಕೆಯಾಗಿತ್ತು. ಆದರೆ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೆ ಬಂದು, ದೇಶವ್ಯಾಪಿ ಬಹುತೇಕ ಮುಕ್ತ ಸಂಚಾರದ ಅವಕಾಶ ದೊರೆಯುತ್ತಿದ್ದಂತೆ ಸೋಂಕಿತರ ಪ್ರಮಾಣ 7.8ಕ್ಕೆ ಏರಿಕೆಯಾಗಿದೆ.
ತಮ್ಮ ಮೂಲ ನೆಲೆಗಳಿಗೆ ವಾಪಸ್ಸಾಗುತ್ತಿರುವ ಜನರಿಂದಾಗಿ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದೆ. ಹೀಗಾಗಿ ತಾಲೂಕು ಮತ್ತು ಗ್ರಾಮಗಳಲ್ಲೂ ಸೋಂಕಿತರು ಪತ್ತೆಯಾಗಿದ್ದಾರೆ. ಇದು ಗ್ರಾಮೀಣ ಭಾಗದ ಪರಿಸರಕ್ಕೆ ಮಾರಕವೂ ಆಗಿದೆ.

ರಾಜ್ಯವಾರು ಮಾಹಿತಿ

ಬಿಹಾರ ಮತ್ತು ಉತ್ತರಪ್ರದೇಶದಲ್ಲಿ
ಮೇ 17 ರಿಂದ 200 ಗಡಿ ದಾಟಿ, ಇದೀಗ 320ಕ್ಕೆ ಬಂದು ತಲುಪಿದೆ, ಅಂದರೆ ಸುಮಾರು ನಾಲ್ಕು ಪಟ್ಟು ಹೆಚ್ಚಳ ಕಂಡಿದೆ. ಬಿಹಾರದಲ್ಲಿ ಕೂಡ ಇದೇ ವಾತಾವರಣ.

ಕರ್ನಾಟಕದಲ್ಲಿ ಕೊರೋನಾ ಕಾಟ

ಇನ್ನು ಕರ್ನಾಟಕದಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಮೇ 10ರ ವೇಳೆಗೆ ಕೇವಲ 55ರ ಆಸುಪಾಸಿನಲ್ಲಿದ್ದ ದೈನಂದಿನ ಪ್ರಕರಣಗಳು ಪ್ರಮಾಣ ಈಗ 150ಕ್ಕೆ ಏರಿದೆ. ಸುಮಾರು ಮೂರು ಪಟ್ಟು ಹೆಚ್ಚಳವಾಗಿದೆ. ಜೊತೆಗೆ ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ, ಜಿಲ್ಲೆಗಳವಾರು ತೆಗೆದುಕೊಂಡರೆ ಕರೋನಾ ಆರಂಭದ ದಿನಗಳಲ್ಲಿ ಹೆಚ್ಚು ಪ್ರಕರಣಗಳನ್ನು ದಾಖಲಾಗಿದ್ದ ಜಿಲ್ಲೆಗಳಲ್ಲಿ ದೈನಂದಿನ ಪ್ರಕರಣಗಳ ಏರಿಕೆಯ ವೇಗ ತಗ್ಗಿದೆ. ಮಂಡ್ಯ, ಹಾಸನ, ದಾವಣೆಗೆರೆ, ಶಿವಮೊಗ್ಗ ಸೇರಿ ಇತರೆ ಜಿಲ್ಲೆಗಳಲ್ಲಿ ಆರಂಭದಲ್ಲಿ ಹಸಿರು ವಲಯದಲ್ಲಿದ್ದ ಜಿಲ್ಲೆಗಳಲ್ಲಿ ದಿಢೀರನೇ ಕಾಣಿಸಿಕೊಂಡ ಸೋಂಕು, ಈಗ ಕೇವಲ 10-12 ದಿನಗಳಲ್ಲಿ ಹತ್ತಾರು ಪಟ್ಟು ಹೆಚ್ಚಳವಾಗಿದೆ. ಹೀಗೆ ದಿಢೀರನೇ ಹೊಸ ಜಿಲ್ಲೆಗಳಲ್ಲಿ ಸೋಂಕು ಕಾಣಿಸಿಕೊಂಡದ್ದು ಅಂತರ ಜಿಲ್ಲಾ ಮತ್ತು ಅಂತರ ರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಿದ ಬಳಿಕವೇ ಮತ್ತು ಸೋಂಕಿತ ಬಹುತೇಕರು ಅತಿ ಹೆಚ್ಚು ಪ್ರಕರಣಗಳಿರುವ ಮುಂಬೈ, ಚೆನ್ನೈ, ಅಹಮದಾಬಾದ್ ನಂತಹ ನಗರಗಳಿಂದ ವಾಪಸು ತಮ್ಮ ತಮ್ಮ ಮೂಲ ಊರುಗಳಿಗೆ ಬಂದವರೇ ಎಂಬುದು ಗಮನಾರ್ಹ.
ಮಂಡ್ಯ, ಶಿವಮೊಗ್ಗ ಮತ್ತು ಹಾಸನ ಸೇರಿ ಬಹುತೇಕ ಜಿಲ್ಲೆಗಳ ಪ್ರಕರಣಗಳಲ್ಲಿ ಶೇ.90ರಷ್ಟು ಪ್ರಕರಣಗಳ ಮೂಲ ಮುಂಬೈ ಎನ್ನುವುದು ದೃಢಪಟ್ಟಿದೆ. ಇದಕ್ಕೆ ಮೂಲ ಕಾರಣ ಲಾಕ್ ಡೌನ್ ಹೇರಿಕೆಯ ಮತ್ತು ಅದನ್ನು ಸಡಿಲಗೊಳಿಸಿದ ಅವೈಜ್ಞಾನಿಕ ಮತ್ತು ವಿವೇಚನಾರಹಿತ ಕ್ರಮಗಳಲ್ಲಿ. ಅದರಲ್ಲೂ ಮುಖ್ಯವಾಗಿ ಯಾವುದೇ ಪೂರ್ವತಯಾರಿ ಇಲ್ಲದೆ ಮೇ 24ರಂದು ಕೇವಲ ನಾಲ್ಕು ಗಂಟೆ ಕಾಲಾವಕಾಶ ನೀಡಿದ ಲಾಕ್ ಡೌನ್ ಸೃಷ್ಟಿಸಿದ ಅವಾಂತರಗಳು ಇವು.

ಸರ್ಕಾರ ಏನು ಮಾಡಬೇಕಿತ್ತು?

ವಲಸಿಗರನ್ನು ತಮ್ಮ ತಮ್ಮ ಊರುಗಳಿಗೆ ತೆರಳಲು ಅವಕಾಶ ನೀಡಿ ಲಾಕ್ ಡೌನ್ ಹೇರಿದ್ದರೆ, ವೈರಾಣು ಇಲ್ಲದೆ ಅವರುಗಳು ತಮ್ಮ ನೆಲೆಗಳಿಗೆ ತಲುಪುತ್ತಿದ್ದರು. ಉದ್ಯೋಗ ಹೋದರೂ, ಜೀವ ಉಳಿವ ಖಾತರಿ ಇರುತ್ತಿತ್ತು.
ಆದರೆ, ಸರ್ಕಾರ ದೇಶದ ಶೇ.30ರಷ್ಟು ಜನಸಂಖ್ಯೆಯ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ.
ಈಗ ಲಾಕ್ ಡೌನ್ ಸಡಿಲಿಕೆ ಬಳಿಕವಾದರೂ ಅಂತಹ ವಲಸಿಗರನ್ನು ಕನಿಷ್ಟ ಸೋಂಕು ಪರೀಕ್ಷೆಗೊಳಪಡಿಸಿ ವ್ಯವಸ್ಥಿತ ಸಾರಿಗೆ ಸೌಲಭ್ಯ ನೀಡಿ ಕಳಿಸಿದ್ದರೂ ಆಗಲೂ ಕರೋನಾ ಗ್ರಾಮೀಣ ಭಾರತಕ್ಕೆ ಹರಡುವುದನ್ನು ತಡೆಯುವ ಅವಕಾಶವಿತ್ತು. ಅದನ್ನೂ ಮಾಡಲಿಲ್ಲ. ಆರಂಭದಲ್ಲಿ ವಾಹನಗಳಲ್ಲಿ ಬಂದವರನ್ನು ಕೆಲವು ಕಡೆ ಜಿಲ್ಲಾ ಗಡಿಗಳಲ್ಲಿ ರಾಜ್ಯ ಗಡಿಗಳಲ್ಲಿ ತಪಾಸಣೆಗೆ ಒಳಪಡಿಸಿ, ಕ್ವಾರಂಟೈನ್ ಮಾಡಿದ್ದರೂ, ಈಗ ನಾಲ್ಕನೇ ಹಂತದ ಲಾಕ ಡೌನ್ ಬಳಿಕ ಕೆಲವು ಕಡೆ ಅದಕ್ಕೂ ವಿನಾಯ್ತಿ ನೀಡಲಾಗಿದೆ. ಮತ್ತೆ ಕೆಲವು ಪ್ರಕರಣಗಳಲ್ಲಿ ಜನರೇ ಚೆಕ್ ಪೋಸ್ಟ್ ಗಳಲ್ಲಿ ಕಣ್ತಪ್ಪಿಸಿ ಕಳ್ಳ ದಾರಿಗಳ ಮೂಲಕ ಹಳ್ಳಿ ತಲುಪಿದ್ದಾರೆ.
ಲಾಕ್ ಡೌನ್ ಅವಧಿಯನ್ನು ಪರೀಕ್ಷೆ, ವೈದ್ಯಕೀಯ ಸೌಲಭ್ಯ ಹೆಚ್ಚಳ ಮತ್ತು ಸಜ್ಜುಗೊಳಿಸುವ ಅವಕಾಶವಾಗಿ ಬಳಸಿಕೊಳ್ಳುವುದು ಜಾಗತಿಕವಾಗಿ ಕಂಡುಬಂದಿರುವ ರೀತಿ. ಆದರೆ, ಭಾರತದಲ್ಲಿ ಮಾತ್ರ, ಲಾಕ್ ಡೌನ್ ಸ್ವತಃ ರೋಗ ತಡೆಯುತ್ತದೆ ಎಂಬಂತೆ ಸರ್ಕಾರ ನಡೆದುಕೊಂಡಿದೆ. ಹಾಗಾಗಿ ಟೆಸ್ಟಿಂಗ್ ವಿಷಯದಲ್ಲಿ ನಾವು ಜಿ20 ರಾಷ್ಟ್ರಗಳಲ್ಲೇ 18 ನೇ ಸ್ಥಾನದಲ್ಲಿದ್ದೇವೆ. ಇನ್ನು ಪರೀಕ್ಷೆಗೊಳಪಟ್ಟವರ ಪೈಕಿ ಸೋಂಕು ದೃಢಪಟ್ಟ ಶೇಕಡವಾರು ಪ್ರಮಾಣ ಕೂಡ ನಿರಂತರ ಏರುಗತಿಯಲ್ಲೇ ಇದೆ. ಹಾಗೇ ಸಾವಿನ ಪ್ರಮಾಣ ಕೂಡ ಏರುಗತಿಯಲ್ಲಿದೆ. ಅಂತಿಮವಾಗಿ ಸೋಂಕು ಹರಡುವಿಕೆ ಕೂಡ ವ್ಯಾಪಕವಾಗಿದ್ದು, ಆರಂಭದ ಸೋಂಕಿತ ಜಿಲ್ಲೆಗಳ ಪ್ರಮಾಣ ಮತ್ತು ಈಗಿನ ಪ್ರಮಾಣಕ್ಕೆ ಹೋಲಿಸಿದರೆ ಲಾಕ್ ಡೌನ್ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದರ ಗುಟ್ಟು ರಟ್ಟಾಗುತ್ತಿದೆ.
ಗ್ರಾಮೀಣ ಭಾರತ ನಿಜಕ್ಕೂ ಹೆಚ್ಚು ಅಪಾಯಕ್ಕೆ ಸಿಲುಕಿದೆ. ಸಣ್ಣ-ಪುಟ್ಟ ಊರುಗಳಲ್ಲೂ ಕರೋನಾ ಪ್ರಕರಣಗಳು ವರದಿಯಾಗತೊಡಗಿವೆ. ಇದು ನಿಜಕ್ಕೂ ಆತಂಕವೇ ಸರಿ.

ಕೃಪೆ: ಪ್ರತಿಧ್ವನಿ

Leave a Reply

Your email address will not be published. Required fields are marked *

You May Also Like

ಶೈಕ್ಷಣಿಕ ವರ್ಷ ಯಾವಾಗ ಅಂತಾ ಸೂಕ್ತ ತೀರ್ಮಾನ

ಮುಂದಿನ ಶೈಕ್ಷಣಿಕ ವರ್ಷದ ಅವಧಿ ಎಷ್ಟಿರಬೇಕು ಎಂಬ ಕುರಿತು ತಜ್ಞರು ಮತ್ತು ಇಲಾಖಾ ಅಧಿಕಾರಿಗಳ ಸಭೆ ಕರೆದು ಸೂಕ್ತ ತೀರ್ಮಾನದ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಅಧಿಕಾರ ಸ್ವೀಕಾರ!

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ.ಪ್ರತಿಜ್ಞಾ ದಿನ…

ರಾಜ್ಯದಲ್ಲಿಂದು 141 ಕೊರೊನಾ ಪ್ರಕರಣ: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು ಮತ್ತೆ 141 ಕೊರೊನಾ ಸೊಂಕು ಪ್ರಕರಣ ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕು…