ಬೆಂಗಳೂರು: ಲಾಕ್ ಡೌನ್ ವಿನಾಯಿತಿ ಬೆನ್ನಲ್ಲಿಯೇ ರಾಜ್ಯಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಆಗಮಿಸುವ ಎಲ್ಲರನ್ನೂ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡುವುದಾಗಿ ಆದೇಶಿಸಿದೆ.
ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಸಮುದಾಯ ಕೇಂದ್ರಗಳಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗುವುದು ಎಂದು ಹೇಳಿದೆ.
ಹೊರ ರಾಜ್ಯಗಳಿಂದ ಬರುವ ಜನರಲ್ಲಿ ಲಕ್ಷಣಗಳಿದ್ದರೂ, ಇಲ್ಲದೇ ಇದ್ದರೂ ಇನ್ನು ಮುಂದೆ ಕ್ವಾರಂಟೈನ್ ಕಡ್ಡಾಯ ಎನ್ನಲಾಗಿದೆ. ಗೋವಾದಿಂದ ವ್ಯಕ್ತಿಯೊಬ್ಬರು ರಾಜ್ಯಕ್ಕೆ ಆಗಮಿಸಿದಾಗ ಜಿಲ್ಲಾ ಉಪ ಆಯುಕ್ತರು ಆ ಬಗ್ಗೆ ಪರಿಶೀಲನೆ ನಡೆಸಿ, ಕ್ವಾರಂಟೈನ್ ವ್ಯವಸ್ಥೆಗಳು ಇಲ್ಲದಿದ್ದರೆ, ಅವರನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ನೋಡಿಕೊಳ್ಳಬೇಕು. ಪಾವತಿ ಆಧಾರದ ಮೇಲೆ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಇರುವವರಿಗೆ ಹೊಟೇಲ್ ಕೊಠಡಿಗಳ ಶುಲ್ಕವನ್ನು ಬಿಬಿಎಂಪಿ ಆಯುಕ್ತರೇ ಶೀಘ್ರದಲ್ಲಿಯೇ ನಿಗದಿ ಮಾಡಲಿದ್ದಾರೆಂದು ತಿಳಿಸಿದೆ.