ಮೈಸೂರು: ಡಿಬಾಸ್ ದರ್ಶನ್ ಇದೀಗ ಪ್ರಾಣಿ ಪ್ರೇಮ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ. ಎತ್ತೊಂದರ ಚಿಕಿತ್ಸೆಗೆ ನೆರವಾಗುವ ಮೂಲಕ ತಮ್ಮಲ್ಲಿರುವ ಪ್ರಾಣಿಗಳ ಬಗೆಗಿರುವ ಕಾಳಜಿಯನ್ನು ತೋರಿಸಿದ್ದಾರೆ. ಕೆ.ಆರ್. ನಗರ ತಾಲೂಕು ಕಾಳಮ್ಮನ ಕೊಪ್ಪಲು ಗ್ರಾಮಕ್ಕೆ ಪಶು ವೈದ್ಯರನ್ನು ಕಳುಹಿಸಿಕೊಟ್ಟು, ಬಸವನ ಚಿಕಿತ್ಸೆಗೆ ನೆರವಾಗಿದ್ದಾರೆ.
ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಬ್ಯರ್ಥಿ ಸುಮಲತಾ ಅಂಬರೀಶ್ ಅವರ ಪ್ರಚಾರ ವೇಳೆ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ರೋಡ್ ಶೋ ಏರ್ಪಡಿಸಲಾಗಿತ್ತು. ಈ ವೇಳೆ ಬಸವವೊಂದು ರೋಡ್ ಶೋಗೆ ಅಡ್ಡಲಾಗಿ ನಿಂತಿತ್ತು. ಈ ಮೂಲಕ ಪ್ರಚಾರಕ್ಕೆ ಅಡ್ಡಿಯಾಯಿತು. ಇದನ್ನು ಗಮನಿಸಿದ ನಟ ದರ್ಶನ್ ಖುದ್ದು ರೋಡ್ ಶೋ ವಾಹನದಿಂದ ಕೆಳಗಿಳಿದು ಬಂದು ಬಸವನ ಮೈಸವರಿದರು. ಇದಾದ ಕೆಲ ಕ್ಷಣದಲ್ಲಿ ಬಸವ ಸ್ಥಳಾವಕಾಶ ಮಾಡಿಕೊಟ್ಟು ರೋಡ್ ಶೋಗೆ ಅನುಮಾಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ದರ್ಶನ್ ಅವರ ಪ್ರಾಣಿ ಪ್ರೀತಿ ಜನರ ಮೆಚ್ಚುಗೆಗೂ ಪಾತ್ರವಾಗಿತ್ತು.
ಇದೇ ಬಸವ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿತ್ತು. ಈ ವಿಷಯನ್ನು ಗ್ರಾಮಸ್ಥರು ನಟ ದರ್ಶನ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಪಂದಿಸಿದ ದರ್ಶನ್ ತಮ್ಮ ಸ್ನೇಹಿತರೊಂದಿಗೆ ಪಶು ವೈದ್ಯರನ್ನು ಔಷಧಿ ಸಮೇತವಾಗಿ ಕಾಳಮ್ಮನಕೊಪ್ಪಲು ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದಾರೆ. ದರ್ಶನ್ ಅವರ ಈ ಕಾರ್ಯ ಗ್ರಾಮಸ್ಥರ ಮೆಚ್ಚುಗೆ ಪಡೆದಿದೆ.