ಹೊಗ್ಗೋ ನಿನ್ನ ತಲಿ ದಿಮ್ ಹಿಡದಂಗಾಗಿ ಹ್ಯಂಗ್ಯಂಗರ ಮಾತಾಡಾಕತ್ತಿನಿ ಅನಸಾಕತ್ತೈತಿ ನಂಗ. ಅಯ್ಯೋ ನಂಗು ಹಂಗಾ ಅನಾಸಾಕತ್ತೈತಿ. ತಲಿ ದಿಮ್ಮಿನ ವಿಷಯ ಹೋಗ್ಲಿ ಹ್ಯಾಂಗಿತ್ತು ಮೊದಲ ದಿನದ ಅನುಭವ….!

ಇದು ಕೂಡಿದ ಗೆಳೆಯಾರು ಮಾತಾಡಕೊಂಡ ರೀತಿ ನೋಡ್ರಿ‌.., ಕೂಡಿದ ಗೆಳೆಯಾರೊಳಗ ಹ್ಯಾಂಗಿತ್ತು ಮೊದಲ ದಿನದ ಅನುಭವ ಅನ್ನೋ ಪ್ರಶ್ನೆ ಕೇಳಿ ದಿಗಲ ಬಿದ್ದಂಗಾತು ಉಳಿದವರಿಗೆ. ಹಾಂ..!, ಮೊದಲ ದಿನದ ಅನುಭವಾನಾ, ನನ್ನ ಮದಿವ್ಯಾಗಿ 50 ವರ್ಷಾತು ಅಂತ ಒಬ್ಬಾವ, ನಂಗಾಗ್ಲೆ ಮೂರು ಮಕ್ಕಳದಾವು ಅಂತ ಮತ್ತೊಬ್ಬಾಂವ. ಅಷ್ಟರೊಳಗ ಪ್ರಶ್ನೆ ಕೇಳಿದವ್ನ ಅಲ್ರೋ ಮೊದಲ ದಿನದ್ ಅನುಭವ ಅಂದ್ರ 45 ದಿನದ ಮ್ಯಾಲ ಇವತ್ತು ಅಂಗಡಿ ಚಾಲೂ ಆಗ್ಯಾವು. ನಮ್ಮ ನಿಮಗೆಲ್ಲ ಇದು ಮೊದಲ ದಿನ ಇದ್ದಂಗಲ್ಲನು. ನೀವು ತಿಳಕೊಂಡ ಅರ್ಥದಾಗ ನಾನು ಹೇಳಲಿಲ್ಲ. ಈ ಅರ್ಥದಾಗ ಹೇಳಿದ್ನಪಾ.

ಓಹೋ..!, ಹಂಗನೂ ನಿನ್ ಮಾತಿನ್ ಅರ್ಥ.., ಅಂದ್ರು ಉಳಿದವ್ರು. ಅದರಾಗ್ ಒಬ್ಬಾವ ಇಲ್ಲಪಾ ನೀ ಹೇಳಿದ್ದು ಖರೇನಾ ಇಷ್ಟು ದಿವಸದ್ ಮ್ಯಾಲ ನಮ್ ಅಂಗಡಿ ಚಾಲೂ ಆಗ್ಯಾವು ಅಂದ್ರು ಅದನ್ನು ತುಗೊಳ್ಳೋವಾಗ ಮೊದಲ ದಿನ ಏನ್ ಇತ್ತಲ್ಲ ನಮಗ ಹುರುಪು ಅದಾ ಹುರುಪಿಲೆ ತುಗೊಂಡೆ ನೋಡೊಪಾ. ಇದು ನಿನ್ನೆ ಗಡದ್ದಾಗಿ ಕುಡಿದು ಬೆಳಿಗ್ಗೆದ್ದು ಕೂಡಿದ್ ಗೆಳೆಯಾರ ಸಂಭಾಷಣೆ ನೋಡ್ರಿ.

ಹಿಂಗ ಮಾತು ಮುಂದುವರಿತು. ಅದರಾಗ ನಮ್ ಚೆನ್ನ, ತನ್ನ ಅನುಭವದ್ ಮಾತು ಹೇಳಿದನ್ರಿ. ನಾನಂತೂ ನಾಕ್ ಗಂಟೆಕಾ ಪಾಳೆಕ್ ನಿಂತಿದ್ನಿಪಾ, ಯಣ್ಣಿ ಸಿಕ್ ಕೂಡ್ಲೆ ಸುಕ್ಕಾನಾ ಹೊಡದ್ಯಾ, ಸುಕ್ಕಾ ಹೊಡದ್ ಒಂಚೂರು ಉಪ್ಪಿನಕಾಯಿ ಹೋಟ್ಯಾಗ್ ಹೋಗಿದ್ದ ತಡ ಏನ್ ಆತು ಅಂತಿ, ಅಂದ. ಅಷ್ಟರೊಳಗ ಉಳಿದವ್ರು ಬಾಯಿ-ಬಾಯಿ ಬಿಟ್ ಕೇಳಕೊಂತ ಏನಾತೋ ಚೆನ್ನಾ ಅಂದ್ರು. ಏನಿಲ್ಲ. ಅದನ್ನ ಅನುಭವಿಸಿದ್ರ ಗೊತ್ತಾಗತ್ತ ಅಂತ ಚೆನ್ನ ಕೂಡಿದ ಗೆಳೆಯಾರ್ ಕಾಲೆಳೆದ.

ಈ ಗೆಳೆಯಾರ ಗುಂಪನ್ಯಾಗಿದ್ದ ತಿಪ್ಪ, ನಂಗಂತ್ರೂ ಸಾಲಲೇ ಇಲ್ಲೋಪಾ. ಕಿಸೆದಾಗ ಇದ್ದ ರೊಕ್ಕದಾಗ ಒಂದ ಕ್ವಾಟರ್ ಸಿಕ್ತಾ, ಅದನ್ ಮುಗಿಸಿ ಅವ್ರಿವ್ರ ಹತ್ರಾ ಕಾಡಿಬೇಡಿ ಮತ್ತೊಂದು ಕ್ವಾಟರ್ ಗೆ ಆಗೋವಷ್ಟು ಹೊಂದಸ್ ಕೊಂಡ ಹೋಗಾದ್ರೊಳಗ ಬಾರ್ ನ್ಯಾವ್ ನಮ್ ಬ್ರ್ಯಾಂಡ್ ಖಾಲಿ ಆಗೈತಿ ಅಂದ. ಅವ್ನ ಮಾತು ಕೇಳಿ ನಂಗ ಹೊಟ್ಯಾಗ ಖಾರಾ ಕಲಿಸಿದಂಗಾತ ನೋಡಪಾ. ಇಲ್ಲೋ ನಮ್ಮ್ ಮಂದಿ, ಪಾಪ ಒಂದುವರಿ ತಿಂಗಳದಿಂದ ಸಾರಾಯಿ ಸಹವಾಸ ಇಲ್ದ ಕಂಗಾಲಾಗಿ ಹೋಗಿದ್ರು. ಮತ್ತಿವತ್ತ ಸಾರಾಯಿ ಸಿಕ್ರ ಬಿಡ್ತಾರೇನು? ನೀನು ಒಂದ ಕ್ವಾಟರ್ ತುಗೊಂಡು ಮತ್ತೊಬ್ಬಗ ಒಂದು ಕ್ವಾಟರ್ ಸಿಕ್ಕಂಗ ನಿನ್ನಿಂದ ಅನುಕೂಲ ಆತು ನೋಡಪಾ. ನಾವು ನಮ್ಮಂಗ ಉಳಿದ ನಮ್ಮಂದಿಗೆ ತಟತಟಗಾರ ಯಣ್ಣಿ ಸಿಕ್ಕು ತುಟಿ ಹಸಿ ಮಾಡ್ಕೊಂಡ್ರ ಸ್ವಲ್ಪ ಸಮಾಧಾನರ ಆಕ್ಕೈತಿ ಅನ್ನೋ ದೊಡ್ಡ ಗುಣ ಬೇಕಪಾ ಅಂತ ಇನ್ನೊಬ್ಬಾವ ಸಮಾಧಾನ ಮಾಡಿದ.

ಅಷ್ಟೊತ್ತಿಗೆ ಚೆನ್ನ ಏನಾರ ಯಾಕಾಗ್ಲಿಪಾ ನಿನ್ನಿ ಸುದ್ದಿ ನಿಮಗ್ ಗೊತ್ತನು ಅಂತ ಕೇಳಿದ. ಎಲ್ಲರೂ ಕಣ್ ಹಿಗ್ಗಿಸಿ ಏನೋ ಚೆನ್ನ ಅದು ಅಂತ ಕೇಳಿದ್ರು.

ನಮ್ಮಿಂದ ರಾಜ್ಯದ ಬೊಕ್ಕಸಕ್ಕ ಭಾಳ್ ಲಾಭ ಆಗೈತ್ರೋ. ಕೋಟಿಗಟ್ಟಲೇ ಹಣ ಕಮಾಯಿ ಆಗೈತಿ ಅಂದ. ಅದಕ್ ಎಲ್ಲರೂ ಆಶ್ಚರ್ಯದಿಂದ ಹೌದಾ ಅಂತ ಭಾಳ್ ಆಶ್ಚರ್ಯ ದಿಂದ ಕೇಳಾಕ್ ಹತ್ತಿದ್ರು.

ನಿನ್ನೆ ರಾಜ್ಯದಾಗ ಕೆಲವು ಜಿಲ್ಲಾ ಬಿಟ್ರ ಭಾಳ್ ಜಿಲ್ಲಾದಾಗ ನಮ್ ಮಂದಿ ಹೆಚ್ಚು ಕಡಿಮಿ ಸಂಪ ಆಗ್ಯಾರಾ? ಆದ್ರು ಕೆಲವು ಜಿಲ್ಲಾದಾಗಿನ ಮಂದಿಗೆ ಯಣ್ಣಿ ಸಿಗಲಿಲ್ಲ ಅನ್ನೋದು ಕೇಳಿ ಮನಸಿಗೆ ಭಾಳ್ ನೋವು ಆತ ನೋಡ್ರಿಪಾ ಅಂದ ಚೆನ್ನ. ಅದಕ್ಕ ಎಲ್ಲಾರು ಹೌದೌದು ಅಂತ ಧ್ವನಿಗೂಡಿದ್ರು.

ಮುಂದುವರೆದು ಮಾತಾಡಿದ ಚೆನ್ನ ರಾಜ್ಯದೊಳಗ ಒಂದ ದಿನಕ್ 45 ಕೋಟಿ 68 ಲಕ್ಷ ರೂ. ಸಾರಾಯಿ ಮಾರಾಟ ಆಗೈತಿ. ಇನ್ನೊಂದು ಖುಷಿ ವಿಚಾರ ಏನಂದ್ರ ಹೆಣ್ಣ-ಗಂಡು ಅನ್ನೋ ಬೇಧ ಎಣಿಸೋ ಈ ದಿಂದಾಗ ಯಾವ ತಾರತಮ್ಯ ಮಾಡದವ್ರಂದ್ರ ನಾವಾ ನೋಡ್ರಿ. ಯಾಕಂದ್ರ ಯಣ್ಣಿಗಾಗಿ ಬಾರ್ ಮುಂದ ಹೆಣ್ಣು-ಗಂಡು , ಜಾತಿ ಅನ್ನೋ ಬೇಧ ಇಲ್ದಂಗ ಪಾಳೆಕ್ ನಿಂತು ಸಮಾನತೆ ಸಂದೇಶ ಸಾರಿವಿ ನಾವು. ಮದ್ಯಾಹ್ನ ಅನ್ನೋಷ್ಟತ್ತಿಗೆ ಭಾಳ್ ಬಾರ್ ನ್ಯಾಗ ಸಾರಾಯಿ ಖಾಲಿ ಆಗಿತ್ತು. ಮೊದಲೆಲ್ಲ, 60 ಕೋಟಿಯಷ್ಟು ದಿನಕ್ಕ ಸಾರಾಯಿ ಮಾರಾಟ ಆಗತಿತ್ತು. ಆದ್ರ ನಿನ್ನೆ ಇನ್ನು ಕೆಲವು ಜಿಲ್ಲಾದಾಗ ಬಾರ್ ಚಾಲೂ ಆಗದಿದ್ದಕ್ಕ ಮತ್ತ ಸ್ಟಾಕ್ ಇಲ್ಲದ್ದಕ್ಕ 46 ಕೋಟಿಯಷ್ಟು ಹಣ ಗಳಿಕೆ ಮಾಡಿ ಕೊಟ್ಟಿವಿ ಅಂದ. ಚೆನ್ನನ ಮಾತು ಕೇಳಿ ಉಳಿದವ್ರ ಆಸಕ್ತಿ ಹೆಚ್ಚಾಗ್ತಾ ಹೋತು. ಮುಂದುವರೆದ ಚೆನ್ನ, ನಿನ್ನೆ ಒಂದಾ ದಿನಕ್ ಒಟ್ಟು 3.9 ಲಕ್ಷ ಲೀಟರ್ ಬಿಯರ್, 8.5 ಲಕ್ಷ ಲೀಟರ್ ಭಾರತೀಯ ಮದ್ಯ ಮಾರಾಟ ಆಗೈತಿ. ಈಗಾಗಲೇ ಕೆ.ಎಸ್.ಬಿ.ಸಿ.ಎಲ್ ಡಿಪೋಗಳೊಳಗ ಸಾರಾಯಿ ಸ್ಟಾಕ್ ಮಾಡ್ಯಾರಂತ. ಡಿಸ್ಟಿಲರಿ ಮತ್ತು ಬ್ರೀವರಿಗಳನ್ನು ನಡೆಸಾಕು  ಅನುಮತಿ ಕೊಟ್ಟಾರಂತ. ಮುಖ್ಯವಾಗಿ ಎಂ.ಆರ್.ಪಿ ಬೆಲೆ ಉಲ್ಲಂಘಿಸಿ ಮಾರಾಟ ಮಾಡೋದು ಗೊತ್ತಾತಂದ್ರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ತಾರಂತ. ಇಷ್ಟೆಲ್ಲ ಸರ್ಕಾರ ನಮಗಾಗಿ ಅನುಕೂಲ ಮಾಡಿ ಕೊಟ್ಟೈತಿ ನೋಡಪಾ ಅಂದ ಚೆನ್ನ. ಉಳಿದವ್ರೆಲ್ಲ. ಹೇ ಭಾಳ್ ಚುಲೋ ಆತೋ ಮಾರಾಯ ಅಂದ್ರು.

ಇದ್ದ ಗೆಳೆಯಾರೊಳಗ ಒಬ್ಬಾವ ಮತ್ತ ಇದಾ ಖುಷಿಗೆ ಇವತ್ತೂ ಒಂಚೂರ್ ಏನಾರಾ..? ಅಂತ ಗೊಣಗಾಕತ್ತಿದ. ಅಷ್ಟರೊಳಗ ಎಲ್ಲರೂ ಜೇಬಿನ್ಯಾಗ ಕೈಹಾಕಿ ಹುಡಕಾ ಕತ್ತಿದ್ರು. ಭಾಳ್ ಮಂದಿಗೆ ಕಿಸೆದಾಗ ಒಂದ್ ಕ್ವಾಟರ್ ಗೂ ಆಗುವಷ್ಟು ಹಣ ಸಿಗಲಿಲ್ಲ. ಒಬ್ಬರ ಮುಖ ಒಬ್ಬರು ನೋಡ್ಕೊಳಾಕತ್ರು. ಅಷ್ಟರೊಳಗ ಅಲ್ಲೆ ಹಾದು ಹೊಂಟಿದ್ದ್ ಸಿದ್ದನಗೌಡ್ರ ಇವ್ರ ಮುಖನೋಡಿ ಪರಿಸ್ಥಿತಿ ತಿಳಕೊಂಡ್ರು. ಥೂ ನಿಮ್ಮ ದೇಶದಾಗ ಏನ್ ನಡದೈತಿ ದುಡಿಬೇಕಂದವ್ರಿಗೆ ದುಡಿಮಿಲ್ಲ, ತುತ್ತ ಅನ್ನಕ್ಕ ಗತಿ ಇಲ್ದಂಗ್ ಆಗೈತಿ‌. ದೇಶಕ್ ದೇಶಾನಾ ಗೋಳಾಡ ಕತ್ತೈತಿ ಇಂಥಾದ್ರಾಗ ಊರಿಗೆ ಒಂದ್ ಚಿಂತಿಯಾದ್ರ ನಿನಗೊಂದು ಚಿಂತಿ ಆಗಂಗ್ ಆಗೈತಿ. ಸಾರಾಯಿಗಾಗಿ ಇಷ್ಟ ಅವಸರಕ್ಕ್ ಬಿದ್ದ ದುಡ್ಡ ಹೊಂದಿಸ್ಕೋತಿರಿ. ಅದಾ ದುಡ್ಡ ಮನೆ ಬಾಳೆಕಾ ಹಾಕ್ರಿ ಅಂತ ಬುದ್ದಿವಾದ ಹೇಳಿದ್ರು. ಅಷ್ಟರೊಳ ಗೆಳೆಯಾರ ಗುಂಪಿನ್ಯಾಗಿದ್ದ ಗೋವಿಂದ ಆತ್ರಿ ಗೌಡ್ರ ಇನ್ನ ಮ್ಯಾಲೆ ನಾವು ಕುಡಿಯಂಗಿಲ್ಲ, ಆದ್ರೆ ಇವತ್ತೊಂದ್ ದಿನ ಕುಡಿತಿವಿ ನಾಳೆಯಿಂದ ಮುಟ್ಟಂಗಿಲ್ಲ, ಇವತ್ತು ಕುಡಿದು ಇವತ್ತ ಕುಡಿತಾ ಬಿಟ್ ಬಿಡ್ತಿವಿ. ಒಂದು 500 ನೋಟ ಇದ್ರ ಇತ್ಲಾಗ್ ತಳ್ರಲ್ಲಾ? ಅಂದ. ಇದ್ರಿಂದ ಸಿಡಿಮಿಡಿ ಆದ ಗೌಡ್ರು ಮಾತ್ರ ಇವರಿಗೆ ಎಷ್ಟು ಹೇಳಿದ್ರು ಅಷ್ಟ ಅಂತ ಮನಿ ಹಾದಿ ಹಿಡಿದ್ರು.

ಮಾತಿನ ಮಲ್ಲ

(ವಿ.ಸೂ:ಇದು ನಿಮ್ಮ ಉತ್ತರ ಪ್ರಭದಲ್ಲಿ ಪ್ರಕಟವಾಗುವ ಖಡಕ್ ರೊಟ್ಟಿ ಅಂಕಣ ವಿಡಂಬನೆ ಒಂದಿಷ್ಟು ಗಂಭೀರ ವಿಷಯಗಳಿಗೆ ತಮಾಷೆ ಟಚ್ ಕೊಟ್ಟು ಈ ನಿಮ್ಮ ಮಾತಿನ ಮಲ್ಲ ಬರೆಯುವ ಉತ್ತರ ಕರ್ನಾಟಕದ ಖಡಕ್ ಶೈಲಿಯಲ್ಲಿ ಬರುವ ಕಥೆ ಒಮ್ಮೆ ಓದಿ, ನಕ್ಕು ಸುಮ್ನಾಗಿ ಬಿಡಿ)

Leave a Reply

Your email address will not be published. Required fields are marked *

You May Also Like

ಹೆಲ್ಮೆಟ್ ಜಾಗೃತಿ: ವಾಹನ ಸವಾರರಿಗೆ ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯ

ಪೊಲೀಸ್ ಇಲಾಖೆಯಿಂದ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಕರಪತ್ರ ನೀಡುವ ಮೂಲಕ ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ವಾಹನ ಚಲಾವಣೆ ಮಾಡಬೇಕು ಎಂದು ಶುಕ್ರವಾರ ಜಾಗೃತಿ ಮೂಡಿಸಿದರು.

ಶಬರಿಮಲೈ ಯಾತ್ರಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ

ಅಯ್ಯಪ್ಪಸ್ವಾಮಿ ದೇಗುಲ ಶಬರಿಮಲೈಗೆ ಹೋಗುವ ಮುನ್ನ ಭಕ್ತಾದಿಗಳಿಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

Букмекерская контора «Мостбет» прекращает деятельность в РФ

Мостбет вывод средств в букмекерской конторе как вывести средства в БК Mostbet…

ಮೋದಿ ಸರ್ಕಾರಕ್ಕೆ 2ನೇ ವರ್ಷದ ಸಂಭ್ರಮ: ಶುಭ ಕೋರಿದ ಯಡಿಯೂರಪ್ಪ

ಬೆಂಗಳೂರು: ತ್ರಿವಳಿ ತಲಾಖ್, 370ವಿಧಿ ರದ್ದು, ಪೌರತ್ವ ತಿದ್ದುಪಡಿ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ವೇದಿಕೆ, ಸುಧಾರಣಾ…