ಮುಂಬಯಿ : ಕೊರೊನಾ ಚಿಕಿತ್ಸೆಗೆ ಪ್ಲಾಸ್ಲಾ ಥೆರೆಪಿ ರಾಮಬಾಣ ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೆ, ಸದ್ಯ ಇದು ಹುಸಿಯಾಗಿದೆ ಎನ್ನಲಾಗುತ್ತಿದೆ. ಪ್ಲಾಸ್ಮಾ ಥೆರೆಪಿ ಚಿಕಿತ್ಸೆ ಪಡೆದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸದ್ಯ ಇಡೀ ದೇಶ ಕೊರೊನಾ ಸೋಂಕಿತರ ಜೀವ ಉಳಿಸಲು ಪ್ಲಾಸ್ಮಾ ಥೆರಪಿ ಮಾಡಲು ಮುಂದಾಗಿತ್ತು. ಅಲ್ಲದೇ, ಬಹುತೇಕ ರಾಷ್ಟ್ರಗಳು ಕೂಡ ಇದರ ಮೊರೆ ಹೋಗುತ್ತಿದ್ದವು. ಆದರೆ, ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದ ಮೊದಲ ವ್ಯಕ್ತಿ ಮೃತಪಟ್ಟಿದ್ದಾರೆ.
ಕೊರೊನಾಗೆ ದೇಶದಲ್ಲಿಯೇ ಮೊದಲ ಬಾರಿಗೆ ಪ್ಲಾಸ್ಮಾ ಚಿಕಿತ್ಸೆ ಪಡೆದು ದೆಹಲಿಯ ರೋಗಿಯೊಬ್ಬರು ಗುಣಮುಖರಾದ ನಡುವೆಯೇ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಪ್ಲಾಸ್ಮಾ ಚಿಕಿತ್ಸೆ ಅಂಗೀಕೃತವಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ನಡೆಸದಿದ್ದರೆ ಸಾವೂ ಸಂಭವಿಸಬಹುದು ಎಂದು ಕೇಂದ್ರ ಸರ್ಕಾರ ಈ ಹಿಂದೆ ಎಚ್ಚರಿಕೆ ನೀಡಿತ್ತು. ಸದ್ಯ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಏ. 20ರಂದು ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ 53 ವರ್ಷದ ವ್ಯಕ್ತಿಗೆ ಏ. 25ರಿಂದ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭದಲ್ಲಿ ಆರೋಗ್ಯ ಸುಧಾರಿಸಿದಂತೆ ಕಾಣಿಸಿದರೂ ನಂತರ ತೀವ್ರ ಉಸಿರಾಟದ ತೊಂದರೆಯಿಂದಾಗಿ ರೋಗಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.