ಕೋರೊನಾ ಟೆಸ್ಟ ಫಲಿತಾಂಶ ವಿಳಂಬ : ಸರ್ಕಾರದ ವಿರುದ್ಧ ವೈದ್ಯರೊಬ್ಬರ ಆಕ್ರೋಶ

Dr Raveendra IMA Karnataka

ಕೋರೊನಾ ಟೆಸ್ಟ್ ಫಲಿತಾಂಶ ವಿಳಂಬ : ಸರ್ಕಾರದ ವಿರುದ್ಧ ವೈದ್ಯರೊಬ್ಬರ ಆಕ್ರೋಶ

ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ಕರ್ನಾಟಕ ಚಾಪ್ಟರ್ ಮಾಜಿ ಅಧ್ಯಕ್ಷ ಡಾ. ರವೀಂದ್ರ ಅವರು ಶುಕ್ರವಾರ ಈ ವಿಡಿಯೋ ಬಿಡುಗಡೆ ಮಾಡಿದ್ದು, ಕಳೆದ ಸೋಮವಾರ ಪರೀಕ್ಷೆಗೆಂದು ಗಂಟಲು ದ್ರವ ಕಳಿಸಿದ್ದರು. ನಾಲ್ಕು ದಿನದ ನಂತರವೂ ಫಲಿತಾಂಶ ಬಾರದ್ದರ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು, ವೈದ್ಯಲೋಕದ ನಿಕಟ ಸಂಪರ್ಕವಿರುವ ನಾನೇ ಹಲವು ಸಲ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದರೂ ಫಲಿತಾಂಶ ಲಭ್ಯವಾಗಲಿಲ್ಲ. ಇನ್ನು ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ್ದಾರೆ.

ಆದಷ್ಟು ಬೇಗ ಟೆಸ್ಟ ಫಲಿತಾಂಶ ನೀಡದೇ ಇದ್ದರೆ, ಆ ವ್ಯಕ್ತಿ ಆ ಅವಧಿಯಲ್ಲಿ ನೂರಾರು ಜನರನ್ನು ಸಂಪರ್ಕಿಸಿದ ಅಂತ ಇಟ್ಟುಕೊಳ್ಳಿ. ನಂತರ ಆತನ ವರದಿ ಪಾಸಿಟಿವ್ ಬಂದರೆ ಏನು ಗತಿ ಎಂದು ಸರ್ಕಾರಕ್ಕೆ ಪ್ರಶ್ನಿಸಿರುವ ಡಾ. ರವೀಂದ್ರ, ಸರ್ಕಾರ ಕೂಡಲೇ ತುರ್ತಾಗಿ ಫಲಿತಾಂಶ ನೀಡುವ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.

ಖಾಸಗಿ ಆಸ್ಪತ್ರೆ, ಲ್ಯಾಬ್ಗಳಿಗೆ ಟೆಸ್ಟ ಮಾಡಲು ಅವಕಾಶ ನೀಡಬೇಕು, ಆದರೆ ಸರ್ಕಾರವೇ ಜನರ ಟೆಸ್ಟಿಂಗ್ ಫೀಸ್ ತುಂಬಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೋವಿಡ್ ಕರ್ತವ್ಯ ನಿರತ ವೈದ್ಯರೊಬ್ಬರು ಮೃತಪಟ್ಟಾಗ ಅವರ ಕುಟುಂಬಕ್ಕೆ  ಪರಿಹಾರ ಕೊಡಲು ಸಾಧ್ಯವಿಲ್ಲ ಎಂದ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಪಂಕಜಕುಮಾರ್ ಪಾಂಡೆಯವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ ರವೀಂದ್ರ.

ಪಿಪಿಇ ಕಿಟ್ ಖರೀದಿಯಲ್ಲೂ ಹಣ ಮಾಡುವ ರಾಜಕಾರಣಿಗಳು, ಅಧಿಕಾರಿಗಳು ಮನುಷ್ಯರೇ ಅಲ್ಲ, ಕಚಡಾ ತಿಂದು ಬದುಕುವವರು ಎಂದು ಹರಿ ಹಾಯ್ದಿದ್ದಾರೆ.

ಶಿಕ್ಷಣ, ಆರೋಗ್ಯದ ಮೇಲೆ ಕಡಿಮೆ ತೆರಿಗೆ ವಿಧಿಸುವ ಬದಲು ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಕೇಂದ್ರ ಸರ್ಕಾರವನ್ನೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ವಿಡಿಯೋ ನೋಡಿ, ಕೇಳಿ.

ಕೊರೊನಾ ಟೆಸ್ಟ್ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಡಾ.ರವೀಂದ್ರ ಅವರ ವಿಡಿಯೋ
Exit mobile version