ಸಿ.ಟಿ ರವಿ ಚೀಟಿ ಆಟ: ಕೊನೆಗೂ ಪಾಸಿಟಿವ್ ಅಂತೆ!

karnataka governament ct ravi

ಸಿ.ಟಿ ರವಿ ಚೀಟಿ ಆಟ: ಕೊನೆಗೂ ಪಾಸಿಟಿವ್ ಅಂತೆ!

ಸಚಿವ ಸಿ.ಟಿ.ರವಿ ಎರಡು ದಿನದಿಂದ ತಮ್ಮ ಕೋರೊನಾ ಪರೀಕ್ಷೆಯ ಕುರಿತು ಟ್ವೀಟ್ ಮಾಡಿದ್ದೇ ಮಾಡಿದ್ದು. ಅವರ ಅನುಭವ ನೋಡಿದರೆ ಟೆಸ್ಟ ಫಲಿತಾಂಶ ‘ಪಾಸಿಟಿವ್, ನೆಗೆಟಿವ್’ ಎಂಬ ಎರಡು ಚೀಟಿಯಲ್ಲಿ ಒಂದನ್ನು ಎತ್ತಿಕೊಳ್ಳುವ ಆಟದಂತಿದೆ. ಇದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯೂ ಆಗಿದೆ.

ಬೆಂಗಳೂರು: ಪುಣ್ಯಕ್ಕೆ ನಾಲ್ಕನೆ ಟೆಸ್ಟ ಮೊರೆ ಹೋಗಿಲ್ಲ ಸಚಿವ ಸಿ.ಟಿ ರವಿಯವರು. ಮೂರಕ್ಕೇ ಸಾಕು ಎಂದಿದ್ದಾರೆ.

ಮೊದಲ ಟೆಸ್ಟ ಪಾಸಿಟಿವ್ ಬಂತಂತೆ. ತಮ್ಮ ಸರ್ಕಾರ ನಡೆಸುತ್ತಿರುವ ಟೆಸ್ಟಿಂಗ್ ಮೇಲೇಯೇ ವಿಶ್ವಾಸವಿಲ್ಲದ ಸಚಿವರು, ಮತ್ತೊಮ್ಮೆ ಗಂಟಲು ದ್ರವವನ್ನು ಹೆಕ್ಕಿಸಿಕೊಂಡು ಎರಡನೇ ಟೆಸ್ಟ್ ಮಾಡಿಸಿಕೊಂಡರಂತೆ. ಅದು ನೆಗೆಟಿವ್ ಬಂತಂತೆ. ಅಷ್ಟೊತ್ತಿಗೆ ಸಚಿವರಿಗೆ ಇದು ಆಟದ ತರಹ ಕಂಡಿತೇನೋ? ಮೂರನೇ ಟೆಸ್ಟ್ ಮಾಡಿಸಿಕೊಂಡರು. ಫಲಿತಾಂಶಕ್ಕೆ ಕಾಯುತ್ತ ‘ಥರ್ಢ್ ಅಂಪೈರ್ ರಿಸಲ್ಟ ಗೆ ಕಾಯುತ್ತಿರುವೆ’ ಎಂದು ಹುಡುಗಾಟಿಕೆಯ ಮಾತಿನಲ್ಲಿ ಟ್ವೀಟ್ ಮಾಡಿದರು.

ಮೂರನೆ ಫಲಿತಾಂಶ ಇವತ್ತು ಪಾಸಿಟಿವ್ ಬಂದಾಗ. ‘ಥರ್ಡ್ ಅಂಪೈರ್ ಫಲಿತಾಂಶ ಪಾಸಿಟಿವ್ ಬಂದಿದೆ. ನಾನು ಆರೋಗ್ಯವಾಗಿದ್ದೇನೆ’ ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

ಸಿ.ಟಿ. ರವಿಯವರ ಒಟ್ಟೂ ಈ ಟೆಸ್ಟಿಂಗ್ ಪ್ರಹಸನ ರಾಜ್ಯದಲ್ಲಿ ಸರ್ಕಾರ ಟೆಸ್ಟಿಂಗ್ ಬಗ್ಗೆ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಚಿವರಿಗೆ ಮಾತ್ರ ‘ಬೆಸ್ಟ ಆಫ್ ಥ್ರೀ’ ಆಪ್ಷನ್ ಇದೆಯೋ, ಜನಸಾಮಾನ್ಯರಿಗೂ ಇದೆಯೋ ಎಂಬುದನ್ನು ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಸ್ಪಷ್ಟಪಡಿಸಲಿ.

ಒಟ್ಟಿನಲ್ಲಿ ಮೂರು ಟ್ವೀಟ್ ಗಳ ಮೂಲಕ ಟೆಸ್ಟಿಂಗ್ ಎಂಬುದು ಚೀಟಿ ಎತ್ತುವ ಆಟ ಎಂಬಂತೆ ಸಿ.ಟಿ. ರವಿ ಚಿತ್ರಿಸಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Exit mobile version