ಹೆಳವರು, ಕೌಟುಂಬಿಕ ವ್ಯವಸ್ಥೆಯ ಚಿತ್ರಗುಪ್ತರು

“ತೂಗು ತೊಟ್ಟಿಲಾಗಲಿ, ಬೆಳ್ಳಿ ಬಟ್ಟಲಾಗಲಿ, ಮನೆಯ ಸಿರಿಸಂಪತ್ತ ಬೆಳೆಯಲಿ, ಯವ್ವಾ, ನೀನು ಕೊಡುವ ಬಗಸಿ ಜೋಳ ಬ್ಯಾಡ. ಕಟ್ಟಿಮ್ಯಾಗಿನ ಜೋಳದ ಚೀಲ ಬಿಚ್ಚಿ ಜೋಳಿಗೆ ತುಂಬಾ ಕೊಡು. ಹಕ್ಕ್ಕಾಗಿನ ಆಕಳ ಮತ್ತು ಕರು ಕೊಡು, ಎಂದು ಹಾಡುತ್ತಾ, ಕಾಡುತ್ತಾ ‘ಕುಟುಂಬದ ವಂಶವೃಕ್ಷದ ಬಗ್ಗೆ ತಿಳಿಸಿ ಕಾಣಿಕೆ ಪಡೆಯುವವರೆ ಹೆಳವರು.

ಹೆಳವರು, ಕೌಟುಂಬಿಕ ವ್ಯವಸ್ಥೆಯ ಚಿತ್ರಗುಪ್ತರಾಗಿದ್ದಾರೆ. ಧಾರ್ಮಿಕ ವ್ಯವಸ್ಥೆಯಲ್ಲಿ ಚಿತ್ರಗುಪ್ತ, ಒಬ್ಬ ವ್ಯಕ್ತಿಯ ಜೀವನದ ಸರಿ ತಪ್ಪಗಳ ಲೆಕ್ಕ ಪತ್ರ ಇಡುತ್ತಾನೆಂದು ಹೇಳುತ್ತಾರೆ. ಆದರೆ ಈ ಹೆಳವರು ಒಂದು ಕುಟುಂಬದ ವಂಶವೃಕ್ಷಗಳ ಪಟ್ಟಿಯನ್ನು ಪಟಪಟಾಂತ ಹೇಳುತ್ತಾರೆ.

ನಮಗೆ ನಮ್ಮ ಕುಟುಂಬದ ಎಷ್ಟು ತಲೆಮಾರುಗಳ ಬಗ್ಗೆ ಗೊತ್ತು.ಅಜ್ಜ, ಮುತ್ತಜ್ಜ, ಮುಂದೆ ಕೇಳಿದರೆ ನಮಗೆ ಗೊತ್ತಿರುವದಿಲ್ಲ. ಆದರೆ ಈ ಹೆಳವರಲ್ಲಿ ನಮ್ಮ ಮನೆತನದ 10-11 ತಲೆಮಾರಿನ ವಂಶಾವಳಿಯ ಮಾಹಿತಿ, ಹೊತ್ತಿಗೆಯಲ್ಲಿ ದೊರೆಯುತ್ತದೆ.ಈ ಹೊತ್ತಿಗೆ ಹಿಡಿದು ಊರೂರು ಅಲೆಯುತ್ತಾ “ಒಂದ ಆಕಳಾ ಹೊಡಿಯ ನನ್ನವ್ವ, ನಿನ ಒಂದ ಸೀರಿ ಕೊಡಾ ತಾಯವ್ವ, ನಾಕು ಸೇರು ಜ್ವಾಳ ಹಾಕ ನಮ್ಮವ್ವ” ಎಂದು ಕೇಳುತ್ತಾ ಊರೂರು ಅಲೆಯುತ್ತಾ ಜೀವನ ನಡೆಸುವ ವೃತ್ತಿಯವರು ಈ ಹೆಳವರು.

ವಿಶಿಷ್ಟ ಲಕ್ಷಣಗಳು:

ಇವರನ್ನು ನೋಡಿದ ತಕ್ಷಣವೆ ಇವರು ಹೆಳವರು ಎಂದು ಗುರುತಿಸ ಬಹುದಾದಷ್ಟು ಚಿರಪರಿಚಿತ ಲಕ್ಷಣ ಹೊಂದಿದ ವ್ಯಕ್ತಿಗಳೇ ಹೆಳವರು.ಬಗಲಿಗೆ ದೊಡ್ಡದಾದ ಕೆಂಬಣ್ಣದ ಶಾಲು, ಜೋಳಿಗೆ’ ತಲೆಗೆ ರುಂಬಾಲು ಬಿಳಿಯ ಧೋತರ, ಉದ್ದದ ನಿಲುವಂಗಿ, ಬಗಲಿನಲ್ಲಿ ಹೊತ್ತಿಗೆ ಹಿಡಿದ, ವಿಶಿಷ್ಟ ಲಕ್ಷಣ ಹೊಂದಿದವರು ಹೆಳವರು. ಇವರದು ಉದ್ದೋಗವೆಂದರೆ ಉದ್ಯೋಗವಲ್ಲ, ಸೇವೆ ಅಂದರೆ ಸೇವೆಯೂ ಅಲ್ಲ, ಇದು ಧರ್ಮವೂ ಹೌದು ಕರ್ಮವು ಹೌದು ಅನ್ನುವ ಅನಿವಾರ್ಯ ಕಾಯಕವಾಗಿದೆ. ಇವರಿಂದ ನಮಗೆ ಗೊತ್ತಿಲ್ಲದ ಎಷ್ಟೋ ಐತಿಹಾಸಿಕ ಕೌಟುಂಬಿಕ ಸತ್ಯಗಳು ಬಯಲಾಗಬಹುದು.

ಕಾಯಕದ ಮೂಲ:

12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಡೆಯಿತು.ಕಲ್ಯಾಣ ಕ್ರಾಂತಿಯ ತರುವಾಯ ಬಸವಕಲ್ಯಾಣದಲ್ಲಿ ಭಾರೀ ನರಮೇಧವೇ ನಡೆಯಿತು ನೂರಾರು ಶರಣರು ಕಲ್ಯಾಣ ತೊರೆದು ಓಡಿ ಹೋದರು.ಮತ್ತೆ ಕೆಲವರು ವಿವಿಧ ಕಾರಣಗಳಿಗೆ ಊರು ಬಿಟ್ಟು ಹೋದರು.ಈ ರೀತಿ ಹೋದ ಜನರು ನಾಡಿನ ಉದ್ದಗಲಕ್ಕೂ ಹರಡಿದರು. ಹೀಗೆ ಹರಡಿ ಹೋದ ಜನರ ವಂಶಾವಳಿ, ಮನೆದೇವರು’ ಇವುಗಳನ್ನು ಎಲ್ಲೆಲ್ಲಿ ನೆಲೆಸಿದ್ದರೂ ಅಲ್ಲಲ್ಲಿಗೆ ತಿಳಿಸಿ ಅವರ ವಂಶಗಳ ದಾಖಲೆಗಳನ್ನು ಸಂಗ್ರಹಿಸುತ್ತಾ ಹೋದರು. ಹೋದ ಆ ಪಂಗಡದವರೆ ಹೆಳವರು. ಅದೇ ಮುಂದೆ ಅವರ ಕಾಯಕವಾಯಿತು.

ಇವರು ಊರು ಬಿಟ್ಟ ಜನರನ್ನು ಸಂಪರ್ಕಿಸಿ, ಅವರ ಬಗ್ಗೆ, ಅವರ ಮೂಲದ ಬಗ್ಗೆ, ಮನೆದೇವರ ಬಗ್ಗೆ ತಿಳಿಸುತ್ತಾ ಹಾಗೂ ಹೊಸದಾಗಿ ಸೇರ್ಪಡೆಯಾದ ಸದಸ್ಯರನ್ನು ದಾಖಲಿಸುತ್ತ ಹೋಗುವವರಾಗಿದ್ದಾರೆ.
ಕುಟುಂಬದವರು ಕೊಡುವ ಕಾಣಿಕೆಗಳನ್ನ ಕಾಡಿ, ಬೇಡಿ, ಹಾಡಿ ಪಡೆಯುತ್ತಾರೆ.ಇವರು ಸುಮಾರು 11 ನೇ ಶತಮಾನ ಗಳಿಂದಲೂ ವಂಶಾವಳಿ ದಾಖಲೆಗಳನ್ನು ಹೇಳುತ್ತಾರೆ.ಈಗಲೂ ಇವರು ಮತ್ತೆ ಎಲ್ಲೆಲ್ಲಿ ಈ ವಂಶದ ಜನರು ಹೋಗಿದ್ದಾರೆಯೋ ಅಲ್ಲಲ್ಲಿಗೆ ಹೋಗಿ ಆ ವಂಶದ ದಾಖಲೆಗಳನ್ನು ಪಡೆಯುತ್ತಾರೆ.ಹಿಂದೆ ಈ ವಂಶಾವಳಿಗಳನ್ನು ಕಂಚಿನ ಪತ್ರಗಳಲ್ಲಿ ಬರೆದು ಇಡುತ್ತಿದ್ದರು.ಹಾಗೂ ಅವುಗಳನ್ನು ತಿಳಿಸಿ ಹೇಳುತ್ತಿದ್ದರು.
ಈಗ ನಿಧನರಾದ ಹಿರಿಯರ ದಾಖಲೆಗಳನ್ನು ಮಾತ್ರ ಕಂಚಿನ ಪತ್ರದಲ್ಲಿ ನಮೂದಿಸುತ್ತಾರೆ.
ಇತರೆ ಮಾಹಿತಿಗಳನ್ನು ಹೊತ್ತಿಗೆಯಲ್ಲಿ ಬರೆದಿಡುತ್ತಾರೆ.ಎಷ್ಟೋ ಜನರಿಗೆ ಮರೆತು ಹೋಗಿರುವ ತಮ್ಮ ಕುಲದೈವಗಳ ನೆನಪುಗಳನ್ನು ಇವರು ಮಾಡಿಕೊಟ್ಟಿದ್ದಾರೆ.

ಮೂಲ ನಿವಾಸ:

ಸಾಮಾನ್ಯವಾಗಿ ಇವರು ‘ರಾಯಭಾಗ, ಗೋಕಾಕ ‘ ವಿಜಯಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಾಗಿ ಇವರ ಕುಟುಂಬಗಳು ಇವೆ. ಅದರಲ್ಲೂ ಗೋಕಾಕದ ಹಿರೇನಂದಿ ಶಿಲ್ತಿಭಾವಿ, ಹುಲಿಕಟ್ಟೆ , ಜೋಕಾನಟ್ಟಿ, ಕಂಟರಟ್ಟಿ, ಗುಜನಟ್ಟಿ, ಶಿವಾಪುರ, ಮೂಡ್ಲಗಿ ‘ ಮಂಟೂರು, ಶ್ಯಾಡಬಾಳ, ಗುಡಿಕ್ಯಾತರ. ಹಳಿಯಾಳ ತಾಲೂಕಿನ ಹೊಸ ಹಡಗಲಿ, ನಾಗಶೆಟ್ಟಿ ಕೊಪ್ಪ, ಹೊಸ ಮಟ್ಟಿಗಾಳ. ಧಾರವಾಡ ಜಿಲ್ಲೆಯ ದೇವಗಿರಿ, ಡಮರಿಕೊಪ್ಪ,ಹಸಂಬ್ರಿ, ಬಸನಕೊಪ್ಪ,ಬನದೂರು. ಮುಂತಾದ ಭಾಗದಲ್ಲಿ ನಮ್ಮ ಜನಾಂಗದವರಿದ್ದಾರೆ.ಇವರು ಕರ್ನಾಟಕದ ಎಲ್ಲಾ ಜನಾಂಗಗಳ ಕುಟುಂಬಗಳ ಮಾಹಿತಿ ನೀಡುತ್ತಾರೆ.ಇವರಲ್ಲಿನ ಕೆಲವರು ಕೆಲವು ಭಾಗಗಳನ್ನು ಹಂಚಿಕೊAಡಿರುತ್ತವೆ. ಅವರು ಆಭಾಗಗಳಿಗೆ ಹೋಗಿ ಮಾಹಿತಿ ನೀಡುವುದು ಮತ್ತು ದಾಖಲೆ ಮಾಡಿಕೊಳ್ಳುತ್ತಾರೆ.

ಅಬ್ಬಿಗೇರಿಯಲ್ಲಿ ತಂಡ:

ಈ ಹೆಳವರ ಒಂದು ತಂಡ ಇತ್ತೀಚೆಗೆ ಸುಮಾರು 10 ದಿನಗಳಿಂದ ಅಬ್ಬಿಗೆರೆಯ ಕಂಠಿಬಸವೇಶ್ವರ ದೇವಸ್ಥಾನದಲ್ಲಿ ನೆಲೆಸಿದೆ.ನೆಲೆಸಿರುವ ಹೊಸ ಹಡಗಲಿಯ ಹೆಳವರ ಹಿರಿಯರಾದ ಮಾರತಿ ಇಮ್ಮಡಿ ಹಾಗೂ ಬಸವರಾಜ ಹೆಳವರ, ಹೆಳವರ ಬಗೆಗಿನ ಮಾಹಿತಿಗಳನ್ನು ಹಂಚಿಕೊAಡಿದ್ದಾರೆ.ಇನ್ನು ಸುಮಾರು 10 ದಿನಗಳವರೆಗೆ ಇಲ್ಲಿಯೇ ಇದ್ದು ಎಲ್ಲಾ ಕುಟುಂಬದವರನ್ನು ಸಂಪರ್ಕ ಮಾಡುತ್ತೇವೆ. ಎ0ದು ತಿಳಿಸುತ್ತಾರೆ.
ಅಬ್ಬಿಗೇರಿ ಯಲ್ಲಿಯೇ ಟೆಂಟಹಾಕಲು ಕಾರಣವೆಂದರೆ, ಇದನ್ನು ಕೇಂದ್ರವಾಗಿಟ್ಟು ಸುತ್ತಲ ಜಕ್ಕಲಿ, ನರೇಗಲ್, ಹಾಲಕೆರೆ, ಬೂದಿಹಾಳ, ತೋ ಟಗಂಟಿ ‘ಕುರುಡಗಿ ಬೆಲೇರಿ ‘ಹಳ್ಳಿಗಳಲ್ಲಿನ ಕುಟುಂಬಗಳನ್ನು ಭೇಟಿ ಮಾಡಲು ಅನುಕೂಲವಾಗುತ್ತದೆ ಎ0ದು ತಿಳಿಸುತ್ತಾರೆ.ಕುಟುಂಬ ಸಮೇತವಾಗಿ ‘ ಬಂದಿರುವ ಇವರು ತಮ್ಮ ಮೂಲ ಊರಲ್ಲಿನ ತಮ್ಮ ಆಸ್ತಿಪಾಸ್ತಿ ನೋಡಿಕೊಳ್ಳಲು ಹಿರಿಯರನ್ನು ಬಿಟ್ಟು ಬಂದಿರುತ್ತಾರೆ.ಮಕ್ಕಳನ್ನು ಸಹ ಕರೆದುಕೊಂಡು ಬಂದಿರುವ ಬಗ್ಗೆ ವಿಚಾರಿಸಲಾಗಿ ‘ಈಗ ಕರೋನಾ ಸಮಯ ಇರುವದರಿಂದ ಶಾಲೆಗಳಿಲ್ಲ ಆದ್ದರಿಂದ ಕರೆತಂದಿದ್ದೇವೆ ಎ0ದು ತಿಳಿಸುತ್ತಾರೆ. ಹಿಂದೆ ಕೊಲ್ಹಾರಿಯಲ್ಲಿ ಅಲೆಮಾರಿಗಳಂತೆ ನಾಡು ಸುತ್ತುತ್ತಿದ್ದೆವು ಆದರೆ ಈಗ ವಾಹನಗಳನ್ನು ಬಳಸುತ್ತಿದ್ದೇವೆ. ಈಗ ಇಲ್ಲಿ ಸುಮಾರು 20 ಕುಟುಂಬಗಳು ಇದ್ದು ಒಂದು ನೂರು ಜನ ಮಹಿಳೆ ಮತ್ತು ಮಕ್ಕಳು ನೆಲೆಸಿದ್ದೇವೆ ಎಂದು ತಿಳಿಸುತ್ತಿದ್ದಾರೆ.

ಕಾಣಿಕೆಗಳೇ ಆದಾಯ:

ಜನರು ನೀಡುವ ಕಾಣಿಕೆ ಕುರಿ, ಕರು, ಆಕಳುಗಳನ್ನು ಜೊತೆಗೆ ಸಾಗಬೇಕಿದೆ.
ಈಗ ಆದಾಯ ಕಡಿಮೆ ಬರುತ್ತಿದೆ. ಕೋವಿಡ್ ನಿಂದಾಗಿ ಜನರು ಕೂಡಾ ನಮ್ಮನ್ನು ಇತ್ತೀಚೆಗೆ ಮೊದಲಿನಂತೆ ನೋಡುತ್ತಿಲ್ಲ. ಇದರಿಂದ ಆದಾಯ ಕಡಿಮೆ ಆಗಿದೆ. ಕೆಲವು ಸಂದರ್ಭಗಳಲ್ಲಿ ಆದಾಯ ಕಡಿಮೆ ಇದ್ದಾಗ ‘ಜನರೆ ನೀಡಿದ ‘ಕಾಣಿಕೆ. ಕರು,ಕುರಿ, ಆಕಳುಗಳನ್ನು ಮಾರಿ ಜೀವನ ಸಾಗಿಸಬೇಕಾಗಿದೆ ಎ0ದು ಬಸವರಾಜ ಹೆಳವರ ತಿಳಿಸುತ್ತಾರೆ.

ಸಂಕ್ರಾಂತಿ ಯಿಂದ ಮಹಾನವಮಿ:

ಸಂಕ್ರಾಂತಿ ಯಿಂದ ಮಹಾನವಮಿವರೆಗೆ ಸುಗ್ಗಿಯ ಸಮಯದಲ್ಲಿ ರೈತರು ಬೆಳೆದ ದವಸಧಾನ್ಯ ಸ್ವೀಕರಿಸುತ್ತ ಹತ್ತಾರು ಜಿಲ್ಲೆಗಳನ್ನು ಸುತ್ತಾಡುತ್ತಾರೆ. ಈ ಸಮಯದಲ್ಲಿ ರೈತರು ಸಂಮೃದ್ಧವಾಗಿ ಬೆಳೆ ಬೆಳೆದಿರುತ್ತಾರೆ.ಕೈತುಂಬ ನೀಡುತ್ತಾರೆ. ಆದ್ದರಿಂದ ಈ ಸಮಯದಲ್ಲಿ ಸಂಚರಿಸುತ್ತೇವೆ ಎ0ದು ತಿಳಿಸುತ್ತಾರೆ.
ಅಲ್ಲದೆ, ಕಾಲಕಾಲಕ್ಕೆ ಆಗುವ ವಂಶಾಭಿವೃದ್ಧಿ ಗಳನ್ನು ದಾಖಲಿಸುತ್ತಾರೆ.ಅಲ್ಲದೆ ಆ ಕುಟುಂಬದಲ್ಲಿ ಯಾರಾದರೂ ನಿಧನರಾದರೆ, ಅಂಥವರ ಹೆಸರನ್ನು ಕಂಚಿನ ಪತ್ರದಲ್ಲಿ ನಮೂದಿಸುತ್ತಾರೆ. ಮನೆಗೆ ಬಂದ ಸೊಸೆಯಂದಿರ ಮಾಹಿತಿ. ಮಕ್ಕಳು ಜನಿಸಿದ ಮಾಹಿತಿಗಳನ್ನು ಕಲೆಹಾಕುತ್ತಾರೆ. ಅಲ್ಲದೆ, ಹಿಂದಿನ ವಂಶವೃಕ್ಷ ಓದಿ, ಕುಟುಂಬವು ನೀಡುವ ದಾನ ಸ್ವೀಕಾರ ಮಾಡುತ್ತಾರೆ.

ಆಸ್ತಿಯಂತೆ ಕುಟುಂಬಗಳ ಹಂಚಿಕೆ:

ತಲೆತಲಾಂತರದಿಂದ ಬಂದಿರುವ ಹೆಳವರ ಕಾಯಕ ಮಹತ್ವದ್ದು. ಹೇಗೆ ನೀವು ನಿಮ್ಮ ಕುಟುಂಬಗಳನ್ನು ಗುರುತ್ತೀರಿ ಎಂದು ವಿಚಾರಿಸಲಾಗಿ ‘ಆಸ್ತಿಗಳ ಹಾಗೆ ನಾವು ನಮ್ಮ ವಂಶಜರಲ್ಲಿ ಕುಟುಂಬಗಳನ್ನು ಹಂಚಿಕೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸುತ್ತಾರೆ.
ನಮ್ಮ ಹಿರಿಯರು ಕಂಚಿನ ಪತ್ರದಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ‘ವಿವಿಧ ಊರುಗಳಲ್ಲಿನ ವಿವಿಧ ಕುಟುಂಬಗಳನ್ನು ಹಂಚಿಕೆ ಮಾಡಿಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಗೊಂದಲವಾಗುವುದಿಲ್ಲ. ಅಲ್ಲದೆ, ಹಂಚಿಕೆಯಾದವರು, ಅವರವರ ಕುಟುಂಬದ ಮಾಹಿತಿ ಹಾಗೂ ದಾಖಲೆ ಮಾಡಿಕೊಳ್ಳುತ್ತಾರೆ.ಒಂದು ವೇಳೆ ಹಂಚಿಕೆಯಾದ ಒಂದು ಕುಟುಂಬ ಬೇರೆ ಊರಲ್ಲಿ ನೆಲೆಸಿದ್ದರೆ ಅಲ್ಲಿಗೆ ಹೋಗಿ ದಾಖಲೀಕರಣ ಹಾಗೂ ಕಾಣಿಕೆ ಸ್ವೀಕರಿಸಲಾಗುತ್ತದೆ.ಎಂದು ತಿಳಿಸುತ್ತಾರೆ.
ಹೆಳವರು, ಬದುಕು ಸಾಗಿಸಲು ಮಾತ್ರವಲ್ಲದೆ, ದಾಖಲೆಗಳ ಸಂರಕ್ಷಣೆ ಮಾಡುವುದಕ್ಕಾಗಿ ಇವರ ಕಾಯಕ ಮಹತ್ವದ್ದು, ಅಲೆಮಾರಿಗಳಾಗಿರುವ ಹೆಳವರು ಕೆಲವೇ ಕ್ಷಣಗಳಲ್ಲಿ ನೂರಾರು ವರ್ಷಗಳ ಹಿಂದಿನ ನಮ್ಮ ವಂಶಜರ ಬಗ್ಗೆ ತಿಳಿಸಿ ಕೊಡುತ್ತಾರೆ. ಹೆಳವರು ಕುಟುಂಬದ ವಂಶವೃಕ್ಷಕ್ಕಾಗಿ ಮಾಡುವ ಕೆಲಸಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ.


ಹೆಳವರು ನಿರಂತರವಾಗಿ ಮಾತನಾಡುವ, ಹಾಡುವ ಶೈಲಿ ವಿಶಿಷ್ಟವಾದದ್ದು, ಯಾವುದೇ ಹೆಚ್ಚಿನ ಶಿಕ್ಷಣವಿಲ್ಲದ ಇವರು, ನಿರಂತರವಾಗಿ ಮಾತನಾಡುವದನ್ನು ಕಂಡಾಗ ಎಂತಹ ವಿದ್ಯಾವಂತನೂ ಮ0ತ್ರ ಮಗ್ದನಾಗುತ್ತಾನೆ. ನಮ್ಮ ಪೂರ್ವಜರ ಮಾಹಿತಿ ಪಡೆಯಬೇಕೆಂದರೆ ಇಂದಿನ ಆಧುನಿಕ ಕಾಲದಲ್ಲಿ ಎಲ್ಲಿಯೂ ಸಾಧ್ಯವಿಲ್ಲ. ಆದರೆ ಅದರ ಬಗ್ಗೆ ತಿಳಿಯಬೇಕಾದರೆ ಈ ಹೆಳವರಲ್ಲದೆ ಬೇರೆ ಎಲ್ಲಿಯೂ ಸಾಧ್ಯವಿಲ್ಲ ಅಲ್ಲವೆ?

ಬಸವರಾಜ ಪಲ್ಲೇದ, ಉಪನ್ಯಾಸಕರು. ಅಬ್ಬಿಗೇರಿ,

Exit mobile version