ಅಪ್ಪಂದಿರ ದಿನಾಚರಣೆ ನಿಮಿತ್ಯ ಕವನ- ನನ್ನಪ್ಪ

ಜೀವನದುದ್ದಕ್ಕೂ ತನ್ನ ಗುಡಸಲಿನ
ಚಿಮಣಿಗೆ ಎಣ್ಣಿ ಹಾಕದೆ ಹಲವು ಮೆರವಣಿಗೆ ಗಳಲ್ಲಿ ಹಿಲಾಲು ಹಿಡಿಯುತ್ತಿದ್ದ ನನ್ನಪ್ಪನ ಮೈ ತುಂಬಾ ಗುಲಾಲು
ಕೈಯಲ್ಲಿ ಪ್ರಜ್ವಲಿಸುವ ಹಿಲಾಲು
ಮೆರವಣಿಗೆ ಅಡ್ಡ ಪಲ್ಲಕ್ಕಿ
ಶವ ಸಂಸ್ಕಾರಕ್ಕೂ ಹೆಗಲು ಕೊಟ್ಟ ನನ್ನಪ್ಪ
ಕಣ್ಣಲ್ಲಿ ಸೂರ್ಯ ತುಂಬಿ ಕೊಂಡು
ಎದೆಯ ಮೇಲೆ ಬುದ್ಧನನ್ನು
ಮಲಗಿಸಿ ಜೋಗುಳ ಹಾಡುವವ ನನ್ನಪ್ಪ
ಲೆಕ್ಕವಿರದ ನಕ್ಷತ್ರಗಳು ತನ್ನ ಜೋಪಡಿಯಲ್ಲಿ ಇಣುಕಿದರೂ
ಬಡತನವೆಂಬ ಬೇತಾಳನ ಗೆಳೆತನ ಬಿಡದ ನನ್ನಪ್ಪ
ಮೆರವಣಿಗೆಯಲಿ ಹಿಲಾಲು ಹಿಡಿದು
ಹಿಡಿಕಾಳು ತಂದಾನು
ಜೋಪಡಿಯಿಂದ ಪಣತಿ ಬೆಳಗಿಸಿಯಾನು ಅಂದುಕೊಂಡು ಶಬರಿವೃತ ಹಿಡಿದಿದ್ದಳು ನನ್ನವ್ವ
ಮೆರವಣಿಗೆಯಲಿ ತೂರುವ
ಚುರುಮರಿ ಕೋಳಿ ಮರಿಗಳಂತೆ ಆರಿಸುವ ಮಕ್ಕಳು
ಧರ್ಮದ ಅಮಲಿನಲ್ಲ
ಜೈಕಾರ ಹಾಕುತ ರಕ್ತ ಹರಿಸಿದವರೆಷ್ಟೋ
ರಕ್ತದ ರಂಗೋಲಿ ಚಿತ್ತಾರವ ಕಂಡು
ಖುಷಿ ಪಟ್ಟವರೆಷ್ಟೋ?
ಎಣಿಕೆಗೆ ಸಿಗುತ್ತಿಲ್ಲ !

ಎ ಎಸ್. ಮಕಾನದಾರ. ಗದಗ

Exit mobile version