ಅಮ್ಮ ವರ್ಣಿಸಲಾಗದ ಶೃಂಗಾರ ಇದು ಕಂಡು ಕಾಣರಿಯದ ಸನಿಹದ ಬಹುದೊಡ್ಡ ಜಗತ್ತು. ಹೆಣ್ತನದ ಮುಖ್ಯ ಮಹತ್ವದ ಕರೆಯೋಲೆ ಇದು, ಕುಟುಂಬದ ಪ್ರತಿ ಹಂತದ ಕಣ್ಮಣಿ ಅವ್ವ. ಮಗುವಿನ ಆಂತರಿಕ ಹಾಗೂ ಭೌತಿಕ ಬೆಳವಣಿಗೆಯ ಶಕ್ತಿ ಅವ್ವ. ಒಂದು ಮಗುವಿಗೆ ಜನ್ಮ ಕೊಡಲು ಸತತ ಒಂಬತ್ತು ತಿಂಗಳು ತನ್ನ ಗರ್ಭದಲ್ಲಿ ಪೋಷಣೆ ಮಾಡುತ್ತಾರೆ.ಎಲ್ಲಿ ಹೋದರು ಜೊತೆಯಲ್ಲಿ ಕರೆದುಕೊಂಡು ಬರುತ್ತಾಳೆ. ಹೆರಿಗೆ ಸಮಯದಲ್ಲಿ ಅವಳಿಗೆ ಮರುಜನ್ಮವಾದಂತೆ, ಏಕೆಂದರೆ ಒಬ್ಬ ಆರೋಗ್ಯವಂತ ಮನುಷ್ಯ ಸಹಿಸಿಕೊಳ್ಳಬಹುದಾದ ನೋವಿಗಿಂತ, ದುಪ್ಪಟ್ಟು ನೋವು ಹೆರಿಗೆ ನೋವು. ಮಗುವಿನ ಆರೋಗ್ಯ ಪಾಲನೆ-ಪೋಷಣೆಗಾಗಿ ಜೀವನವೇ ಒತ್ತೆ ಇಡುವ ಅವ್ವ ದೇವರಿಗಿಂತ ದೊಡ್ಡವಳು. ಹುಟ್ಟಿದ ಮಗು ಒಂದು ಹಂತಕ್ಕೆ ಬರುವವರೆಗೂ ಮನಸ್ಸು ದೇಹ ಇವೆರಡನ್ನು ದಂಡಿಸುತ್ತಾಳೆ. ಅಮ್ಮನೆಂದರೆ ಮಕ್ಕಳ ಭವಿಷ್ಯದ ರಚನೆಯ ಬಾಗಿಲು ತನ್ನ ಮಗುವಿನಲ್ಲಿರುವ ಆಸೆ ಹಾಗೂ ಹಂಬಲ ತಿಳಿದುಕೊಳ್ಳುವ ಸಾಮರ್ಥ್ಯ ಹೊಂದಿರುವವಳು ತಾಯಿ ಮಾತ್ರ. ಹಸಿದಾಗ ಹಾಲುಣಿಸಿ ನಿದ್ದೆ ಬಂದಾಗ ಲಾಲಿಹಾಡಿ, ಜೋಳಿಗೆಗೆ ಹಾಕಿ ತೂಗಿ ಮಲಗಿಸುವ ಮಹಾಮಾತೆ. ಭೂಮಿತಾಯಿಯಷ್ಟೆ ತಾಳ್ಮೆ ಹೊಂದಿದ ಜೀವ ಆ ಹೆತ್ತ ಕರಳು. ಊಟ ಮಾಡಲು ಹಠ ಮಾಡಿದರೆ ಅಲ್ಲಿ ಇಲ್ಲಿ ಕರೆದುಕೊಂಡು ಹೋಗಿ, ಚಂದಮಾಮನ ಕಥೆ ಹೇಳಿ ನಮ್ಮೊಂದಿಗೆ ಆಟವಾಡಿ ಹೊಟ್ಟೆ ತುಂಬಾ ಊಟ ಮಾಡಿಸಿ ಸಲುಹುವಳು. ತನ್ನ ಮಗು ತೊದಲು ನೋಡಿ ಅಮ್ಮ ಎಂದರೆ ಬೆಲ್ಲ ಸವಿದಷ್ಟೇ ಖುಷಿಪಡುವವಳು. ತನ್ನ ಸೌಂದರ್ಯವನ್ನು ಹಾಗೂ ಆರೋಗ್ಯವನ್ನು ಲಕ್ಷೀಸದೆ ಮಗುವಿನ ಬೆಳವಣಿಗೆಯ ಶ್ರಮಜೀವಿ. ಭೂಮಿಯ ಮೇಲೆ ತನ್ನ ಶ್ರಮಕ್ಕೆ ಫಲ ಕೇಳದೇ ಇರುವ ವ್ಯಕ್ತಿಯಂದರೆ ಅವ್ವ ಮಾತ್ರ. ಹಣವಿದ್ದರೆ ಸಾಕು ಜಗತ್ತನ್ನೇ ಕೊಂಡುಕೊಳ್ಳಬಹುದು, ಆದರೆ ನೀನು ಅಮ್ಮ ಎಂದ ತಕ್ಷಣ ಎಂತಹ ಹೆಣ್ಣು ಜೀವವಾದರೂ ಮರಗುತ್ತದೆ. ಅಂದರೆ ತಾಯಿಯ ಮಡಿಲು ಸಿಗಲಾರದು. ತನ್ನ ಜೀವ ಇರುವವರೆಗೂ ಮಕ್ಕಳನ್ನು ಕಾಳಜಿ ಮಾಡುವ ಆತ್ಮವಿದು. ಅವ್ವನ ವರ್ಣನೆಗೆ ಪದಗಳೇ ಇಲ್ಲ. ಎಷ್ಟು ನೋಡಿದರು ಕಣ್ಣು ಮುಚ್ಚುವುದಿಲ್ಲ. ಎಷ್ಟು ಹೊಗಳಿದರೂ ಭಾವನೆಗೆ ಸರಿಸಾಟಿ ಇಲ್ಲ.
ಮನುಷ್ಯ ಮಾತ್ರ ಅಲ್ಲ ಪ್ರತಿ ಜೀವಿಯೂ ತನ್ನ ಕಂದನಿಗೆ ಜನ್ಮ ನೀಡಲು ಸಾಕಷ್ಟು ಕಷ್ಟ ಪಡುತ್ತೇವೆ. ಚೇಳು ತನ್ನ ಮರಿಗಳಿಗೆ ಜನ್ಮ ಕೊಡಲು ತನ್ನ ದೇಹವನ್ನು ಎರಡು ಭಾಗ ಮಾಡಿ ಕೊನೆಯುಸಿರೆಳೆದು ಮಕ್ಕಳಿಗೆ ಜೀವ ಕೊಡುತ್ತದೆ. ನವಿಲು ತಾಯ್ತನ ಪಡೆಯಬೇಕಾದರೆ ಗಂಡು ನವಿಲಿನ ನೃತ್ಯದ ಗಳಿಗೆಯನ್ನು ಕಾಯುತ್ತದೆ. ಏಕೆಂದರೆ ಗಂಡು ನವಿಲು ತನ್ನ ಮನಸ್ಸು ಇಚ್ಚಿಸಿದಾಗ ದಣಿವಾಗಿ, ಅಳು ಬರುವವರೆಗೂ ಕುಣಿತ ನಿಲ್ಲಿಸುವುದಿಲ್ಲ. ಕುಣಿದು ಕಣ್ಣೀರು ಒಂದು ಕಡೆ ಬಿದ್ದಾಗ ಆ ಕಂಬನಿಗಳನ್ನು ಹೆಣ್ಣು ನವಿಲು ಕುಡಿದು ಗರ್ಭ ಧರಿಸುತ್ತದೆ. ಪ್ರತಿ ಹೆಣ್ಣುಜನ್ಮ ತಾಯ್ತನದ ಬಯಕೆ ಹೊಂದಿರುತ್ತದೆ. ಆದರೆ ಆ ಭಾಗ್ಯ ಎಲ್ಲಾ ಮಹಿಳೆಗೂ ಸಿಗುವುದಿಲ್ಲ.
ಅವ್ವ ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡಿ ಓದಿಸಿ ಒಂದು ಒಳ್ಳೆಯ ಸ್ಥಾನ ಕೊಡಿಸುವಲ್ಲಿ ಬಹಳಷ್ಟು ಶ್ರಮ ವಹಿಸುತ್ತಾಳೆ. ಮಕ್ಕಳಿಗೆ ಯಾವುದನ್ನು ಹೊರೆ ಮಾಡದೆ ಸುಖವಾಗಿರಲಿ ಎಂದು ಬಯಸುತ್ತಾಳೆ. ಆದರೆ ಕೆಲವರು ತಂದೆ-ತಾಯಿ ಯನ್ನೇ ದ್ವೇಷಿಸುತ್ತಾರೆ ಹಣದ ಅಮಲಿನಲ್ಲಿ ಹೆತ್ತ ಕರುಳಿನ ಕೂಗು ಕೇಳಿಸಿಕೊಳ್ಳುವುದಿಲ್ಲ ವಯಸ್ಸಾದರೆ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಅವರು ಮಾಡಿದ ಕಷ್ಟದ ಕೆಲಸವನ್ನು ಲೆಕ್ಕಿಸದೆ ದೂರುತ್ತಾರೆ.
ಇನ್ನೊಂದುಕಡೆ ತಂದೆತಾಯಿಗಳನ್ನು ಕಾಣದ ಜೀವಗಳು ಮಮತೆಯ ಮಡಿಲಿಗೆ ಹಂಬಲಿಸುತ್ತದೆ ಅಂದರೆ ಏನು ಮಾಡಲು ಆಗುತ್ತಿಲ್ಲ ಹೆತ್ತವರನ್ನು ಕಾಣದೆ ಉನ್ನತ ಸ್ಥಾನದಲ್ಲಿರುವವರಿಗೆ ತಾಯಿಯ ಮಡಿಲು ಸಿಕ್ಕಿಲ್ಲ. ದಿಕ್ಕಿಲ್ಲದೆ ಬಿಕ್ಷೆ ಬೇಡಿ ಬೀದಿಬೀದಿ ಅಲೆಯುವ ಮಕ್ಕಳನ್ನು ಕಂಡರೆ ರಕ್ತ ಕುದಿಯುತ್ತದೆ. ಜೀವನ ನಡೆಸುವುದು ಕಷ್ಟ. ಅನಾಥರನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಅವ್ವ ಇದ್ದರೆ ಚಿಂತೆ ಇಲ್ಲದೆ ಜೀವನ ನಡೆಸಬಹುದಿತ್ತು.
ಗಂಡನ ಮನೆಗೆ ಹೋದ ಹೆಣ್ಣು ತಾಯಿಲ್ಲದ ತವರಿಗೆ ಬರಲು ಅವಕಾಶ ಕೊಡುತ್ತಿಲ್ಲ ಈ ಸಮಾಜ. ಬಂದರೆ ಸದಾ ಕಾಡುವ ನೆನಪುಗಳು. ಅವ್ವನಿದ್ದರೆ ಇಚ್ಚಿಸಿದಾಗ ತವರಿಗೆ ಬಂದು ಹೋಗಬಹುದಿತ್ತು ಎಂಬ ಹಂಬಲ. ಸಹೋದರತ್ವ ಎಷ್ಟಿದ್ದರೂ ಅವ್ವನ ಜಾಗ ತುಂಬಲು ಯಾರು ಅರ್ಹರಲ್ಲ. ಅವ್ವನೆಂದರೆ ದೈವತ್ವದ ಸ್ವರೂಪ. ಕಾಮಧೇನು, ಕೋಟಿ ದೇವರಿಗಿಂತ ದೊಡ್ಡವಳು ಹೆತ್ತ ತಾಯಿ. ಬೆಲೆಕಟ್ಟಲಾಗದ ದುಬಾರಿ ಆಭರಣ ನನ್ನವ್ವ. ಸೃಷ್ಟಿಯ ಮೊದಲ ಸೊಬಗು,ಸಂಪತ್ತು, ಸೌಭಾಗ್ಯ. ಸ್ವತ್ತು ಹಡೆದವ್ವ.
- ಗಾಯತ್ರಿ ಮಾಲಿಪಾಟೀಲ
