ಕೊರೋನಾ ಕಾವ್ಯ-1

ಕೊರೋನಾ ಕಾವ್ಯ ಸರಣಿಗೆ ಕವನ ಬರೆದವರು ಮುತ್ತು.ಹೆಚ್.ಬಿ(ಶಿಕ್ಷಕರು), ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಬಡತನದ ಬೇಗೆಯಲ್ಲಿ ಬೆಂದು ಬೆಳೆದ ಮುತ್ತು, ಭವಿಷ್ಯದ ಭರವಸೆಯ ಶಿಕ್ಷಕ ಮತ್ತು ಬರಹಗಾರ. ಅವರಲ್ಲಿನ ಜನಪರ ಮತ್ತು ಜೀವಪರ ಕಾಳಜಿಯೇ ಈ ಕಾವ್ಯದಲ್ಲಿ ಅಕ್ಷರ ರೂಪದಲ್ಲಿ ಹೊರಹೊಮ್ಮಿದೆ. ಸದಾ ಸಾಮಾಜಿಕ ಕಾಳಜಿ, ಕ್ರೀಯಾಶೀಲತೆ ಇವರ ಗುಣ ಸ್ವಭಾವ. ಮುತ್ತು ಅವರ ಸಾಧನೆಯ ಹಾದಿ ಸುಗಮವಾಗಲಿ. ಜೊತೆಗೆ ಸಮಾಜಕ್ಕೆ ಅವರಿಂದ ಹೆಚ್ಚಿನ ಸೇವೆ ಸಿಗಲಿ ಎಂದು ಹಾರೈಸೋಣ.

ಇದಕ್ಕೆ ಮದ್ದೆಲ್ಲಿ…?
ಅಲ್ಲೆಲ್ಲೋ ದೇವರು
ಮಲಗಿದ್ದಾನೆ
ನಿಮ್ಮ
ಮಂದಿರ ಮಸೀದಿ ಚರ್ಚುಗಳಲ್ಲಿ,
ಕೊರೊನಾ ಎಂಬ ವೈರಸ್ ಗೆ
ಹೆದರಿ
ಅವಿತು ಕೂತಿದ್ದಾನೆ
ಮಂದಿರಗಳ ಮೂಲೆಗಳಲ್ಲಿ
ಮಸೀದಿಗಳ ಪಡಸಾಲೆಗಳಲ್ಲಿ
ಚರ್ಚುಗಳ ಚಾವಣಿಗಳಲ್ಲಿ......
 
ನಿತ್ಯವೂ
ದೇವಾಲಯಗಳ ಮುಂದೆ
ಕ್ಯೂ ನಿಂತು ದರ್ಶನ
ಪಡೆದು ತೀರ್ಥ
ಕುಡಿಯುತ್ತಿದ್ದ ಜನ ಈಗ
ದಾವಾಖಾನೆಗಳ ಕದ ತಟ್ಟಿದ್ದಾರೆ,
ದೇವರೇ ಕಾಪಾಡು
ಎಂದವರೀಗ
ಆಕ್ಸಿಜನ್ನು, ಮಾಸ್ಕು,
ವೆಂಟಿಲೇಟರ್ ಗಳ ಮೊರೆ ಹೋಗಿದ್ದಾರೆ......
 
ದುಡ್ಡಿದ್ದವರು
ದೊಡ್ಡವರು
ಆಕಾಶದಲ್ಲಿ ಹಾರಾಡುವವರು ತಂದ
ಈ ವೈರಸ್ ಗೆ
ಬಡವರು ಬೆಲೆ ತೆರುತ್ತಿದ್ದಾರೆ,
ಮನೆ ಮಠ ಕಿಟಕಿ ಬಾಗಿಲು
ಬಾಲ್ಕನಿಗಳೇ ಇಲ್ಲದ
ಬಡವರು
ಬೀದಿಗಿಳಿದು
ಗಂಟೆ ಜಾಗಟೆ ತಾಟುಗಳ ಬಾರಿಸಿ
ಚಪ್ಪಾಳೆ ತಟ್ಟಿದ್ದಾರೆ......
 
ಮೊನ್ನೆ ಮೊನ್ನೆ
ಮೆರೆದವರು
ಥೂ ನೀಚ ಎಂದವರು
ಮಾನವೀಯತೆ
ಮರೆತವರಿಂದು ಹೆದರಿ
ಮನೆಯಲ್ಲೇ ಇದ್ದಾರೆ,
ಸ್ಟೆಥಸ್ಕೋಪ್ ಹಿಡಿದವರು
ಶುಶ್ರೂಷೆ ಮಾಡೋರು
ಕಸ ಬಳಿವ ಕಾರ್ಮಿಕರು
ಕಾನೂನು ಕಾಯ್ವವರು
ಜೀವವ ಲೆಕ್ಕಿಸದೇ
ಎದೆಗೊಟ್ಟು ನಿಂತಾರೆ......
 
ಭಾರತಕ್ಕೀ ಸೋಂಕು
ಹೊಸತೇನಲ್ಲ
ಸಾವಿರ ಸಾವಿರ
ವರ್ಷಗಳಿಂದಲೂ
ಆ ಬೀದಿ ಈ ಬೀದಿ
ಊರಗಸಿಯ ಮುಂಬದಿ
ಸುಳಿಯುತ್ತಲೇ ಇದೆ
ನಮ್ಮಲ್ಲೇ
ನಮ್ಮೊಳಗೇ
ಜಾತಿ, ಅತ್ಯಾಚಾರ,
ಭ್ರಷ್ಟಾಚಾರ, ಅಸ್ಪೃಶ್ಯತೆ,
ಅಸಮಾನತೆಯ ರೂಪದಲಿ
ಹೌದು
ಇದಕ್ಕೆಲ್ಲ ಮದ್ದೆಲ್ಲಿ.....?
 
✍ಮುತ್ತು.ಹೆಚ್.ಬಿ, ಶಿಕ್ಷಕರು.
Exit mobile version