ಮೆಕ್ಕೆಜೋಳದ ಬೆಳೆಗೆ ಬೆಂಕಿ ಇಟ್ಟ ಕಿಡಗೇಡಿಳು

ಹೊಲದಲ್ಲೇ ಸುಟ್ಟು ಕರಕಲಾದ ಫಸಲು

ತ್ತರಪ್ರಭ ಸುದ್ದಿ

ಗಜೇಂದ್ರಗಡ: ತಾಲ್ಲೂಕಿನ ಕುಂಟೋಜಿ ಗ್ರಾಮದ ಗುಡ್ಡದ ಮೇಲಿನ ಹೊಲದಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳದ ಬೆಳೆಗೆ ಕಿಡಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕಟಾವಿಗೆ ಬಂದಿದ್ದ ಫಸಲು ಹೊಲ್ಲದಲ್ಲೇ ಸುಟ್ಟು ಕರಕಲಾಗಿದೆ. ಸಾಲಾ ಮಾಡಿ ಕೃಷಿ ಮಾಡಿದ್ದ ಗಜೇಂದ್ರಗಡ ಪಟ್ಟಣದ ಲಂಬಾಣಿ ತಾಂಡಾದ ರೈತ ಮಹಿಳೆ ಲಕ್ಷ್ಮವ್ವ ಉಮಲಪ್ಪ ರಾಠೋಡ ಕೈಗೆ ಬಂದ ಜೋಳ ಸುಟ್ಟು ಬೂದಿಯಾದ ಕಾರಣ ಕಣ್ಣೀರು ಇಡುತ್ತಾ ಕಿಡಗೇಡಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾಳೆ.

ಮಳೆಯಾಶ್ರಿತ ಒಣ ಬೆಸಾಯದ ಭೂಮಿಯಾದ ಕುಂಟೋಜಿ ಗುಡ್ಡದ ಮೇಲೆ ತಲೆತಲಾಂತರಿಂದ ಕೃಷಿ ಮಾಡಿಕೊಂಡು ಉಪಜೀವನ ನಡೆಸುತ್ತಿದ್ದಾರೆ. ಆಗಾಗ ಸುರಿಯುವ, ಕೈಕೊಡುವ ಮಳೆಯ ನಡುವೆಯೂ ಧೈರ್ಯಮಾಡಿ ಪ್ರತಿವರ್ಷ ಬಿತ್ತನೆ ಮಾಡುತ್ತಾರೆ. ಗುಡ್ಡದ ಮೇಲಿನ ಕೃಷಿ ಚಟುವಟಿಕೆಗೆ ರೈತರು, ಕೃಷಿ ಕಾರ್ಮಿಕರು, ಮಹಿಳೆಯರು ಬರಲು ಹಾಗೂ ಗುಡ್ಡ ಹತ್ತಲು ಹಿಂದೇಟು ಹಾಕುವ ಸಂದರ್ಭದಲ್ಲಿ ಅವರಿಗೆ ಮನವೋಲಿಸಿ ಹೆಚ್ಚಿನ ಕೂಲಿ ನೀಡಿ ಇಲ್ಲಿನ ರೈತ ಸಮುದಾಯ ಕೃಷಿ  ಮಾಡುತ್ತಾರೆ. ನಂತರ ಅದಕ್ಕೆ ಬೀಜೋಪಚಾರ, ಕಳೆ ತೆಗೆಯುವುದು, ರಂಟೆ ಹೊಡೆಯುವುದು, ಗೊಬ್ಬರ ಹಾಕುವುದು ಹೀಗೆ ಪರಿಶ್ರಮ ಪಡುತ್ತಾರೆ.

  ಬೆಳೆ ಬಂದಾಗ ಅಡವಿ ಜೀವಿಗಳಾದ ಹಂದಿ, ನವಿಲು, ಕೋತಿಗಳ ಉಪಟಳದ ನಡುವೆ ಹಾಗೂ ಕುರಿಗಾಹಿಗಳ, ದನಗಾರರ ಕಾಟದ ನಡುವೆ ಅಳಿದು ಉಳಿದ ಫಸಲನ್ನು ಮನೆಗೆ ತೆಗೆದುಕೋಂಡು ಹೋಗುತ್ತಾರೆ. ಅದರಲ್ಲೂ ಈ ಬಾರಿ ಮಳೆ ಕೈಕೊಟ್ಟಿರುವ ಕಾರಣ ಬಹಳ ತೊಂದರೆ ಅನುಭವಿಸಿದ್ದಾರೆ. ಅದರ ನಡುವೆ ಬೆಳೆದು ನಿಂತಿದ್ದ ಬೆಳೆಗ ಕಿಡಗೇಡಿಗಳು ಬೆಂಕಿಯಿಟ್ಟಿರುವ ಕಾರಣದಿಂದ ರೈತ ಮಹಿಳೆ ಕಂಗಾಲಾಗಿದ್ದಾಳೆ ಹಾಗೂ ಕಣ್ಣೀರು ಹಾಕುತ್ತಿದ್ದಾಳೆ.

        ಬೀಜೋಪಚಾರ, ಕೂಲಿ, ಕುಂಟೆ, ಗೊಬ್ಬರ ಸೇರಿಸಿ ಅಂದಾಜು 30 ಸಾವಿರ ರೂಪಾಯಿ ಖರ್ಚು ಮಾಡಿ ಅಂದಾಜು 3 ಎಕರೆಯಷ್ಟು ಹೊಲಕ್ಕೆ ಈ ಬಾರಿ ಬಿತ್ತನೆ ಮಾಡಲಾಗಿತ್ತು. ಅನಾರೋಗ್ಯದ ನಡುವೆಯೂ ಹೊಲಕ್ಕೆ ಬರುತ್ತಿದ್ದೆ ಕೆಲವೊಮ್ಮೆ ಕಾಲಬೇನೆ ಜಾಸ್ತಿಯಾದಾಗ ಮಾತ್ರ ಬರುತ್ತಿರಲಿಲ್ಲ ಆದರೆ 3 ಎಕರೆಯ ಮೆಕ್ಕೆ ಜೋಳದಲ್ಲಿ ಅಂದಾಜು ಶೇ. 70 ರಷ್ಟು ಹೊಲ ಸುಟ್ಟು ಕರಕಲಾಗಿದೆ ಎಂದು ಹೊಲದ ರೈತ ಮಹಿಳೆ ಲಕ್ಷ್ಮವ್ವ ಉಮಲಪ್ಪ ರಾಠೋಡ್ ಪತ್ರಿಕೆಯ ಎದುರು ತಮ್ಮ ಅಳಲನ್ನು ತೋಡಿಕೊಂಡರು.

        ಮನುಷ್ಯನಾಗಿ ಹುಟ್ಟಿದವನಿಗೆ ಬೆಳೆಗಳಿಗೆ ಬೆಂಕಿ ಇಡಲು ಮನಸ್ಸಾದರು ಹೇಗೆ ಬಂದಿತು. ಮೆಕ್ಕೆಜೋಳ ಬೇಕು ಎಂದು ಕೇಳಿದರೆ ಎಲ್ಲಾ ಫಸಲನ್ನು ಅವರಿಗೆ ಕೊಟ್ಟು ಕಳುಹಿಸುತ್ತಿದ್ದೆ. ಯಾರು ಬೆಂಕಿ ಹಚ್ಚಿದ್ದಾರೋ ಅವರಿಗೆ ದೇವರು ಖಂಡಿತವಾಗಿ ಒಳ್ಳೆಯದನ್ನು ಮಾಡುವುದಿಲ್ಲ ಎಂದು ಲಕ್ಷ್ಮವ್ವ ಹೇಳಿದರು.

      ಯಾವುದೇ ಗ್ರಾಮದಲ್ಲಿ ಬೆಳೆಗಳಿಗೆ ಬೆಂಕಿ ಇಡುವ ಪುಂಡರಿಗೆ ತಕ್ಕ ಶಿಕ್ಷೆ ನೀಡಲು ಆಯಾ ಭಾಗದ ರೈತ ಸಂಘಟನೆಗಳು ಮುಂದಾಗಬೇಕು. ಇದೊಂದು ಹೀನ ಕೃತ್ಯವಾಗಿದೆ. ತಿನ್ನುವ ಅನ್ನಕ್ಕೆ ಯಾವತ್ತೂ ಬೆಂಕಿ ಇಡುವ ಕೆಲಸ ಮಾಡಬಾರದು. ಬೆಳೆನಾಶದಿಂದ ಕಂಗಾಲಾಗಿರುವ ರೈತ ಮಹಿಳೆಗೆ ಸೂಕ್ತ ಪರಿಹಾರ ಕೊಡಲು ಸಂಬಂಧಿತ ಇಲಾಖೆಯವರು ಮುಂದಾಗಬೇಕು ಹಾಗೂ ಬೆಂಕಿ ಇಟ್ಟವರನ್ನು ಹುಡುವ ಪ್ರಯತ್ನ ಮಾಡಬೇಕು ಎಂದು ಜೈ ಭೀಮ್ ಸೇನಾ ರಾಜ್ಯ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಮೈಲಾರಪ್ಪ ವೀ. ಚಳ್ಳಮರದ ಆಗ್ರಹಿಸಿದರು.

Exit mobile version