ಕೆಎಸ್ಆರ್ ಟಿ ಸಿ ಬ್ರ್ಯಾಂಡ್ ಕರ್ನಾಟಕದ ಕೈ ತಪ್ಪಿಲ್ಲ : ಸಚಿವ ಸವದಿ ಸ್ಪಷ್ಟನೆ

ಬೆಂಗಳೂರು: ಕೆಎಸ್ಆರ್ ಟಿಸಿ ಪದ ಮತ್ತು ಲೋಗೋವನ್ನು ಕೇರಳಪಾಲಾಗಿದೆ ಎಂಬ ಸುದ್ದಿ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ನಿರಾಕರಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಕೆ ಎಸ್ ಆರ್ ಟಿಸಿ ಬ್ರ್ಯಾಂಡ್ ಕೇರಳದ ಪಾಲಾಗಿಲ್ಲ. ಕೆಎಸ್​ಆರ್​ಟಿಸಿ ಎಂಬ ಹೆಸರು ಕರ್ನಾಟಕದ ಕೈತಪ್ಪಿದೆ ಎಂಬ ಆತಂಕ ಇಲ್ಲ. ಕೆಎಸ್​ಆರ್​ಟಿಸಿ ಎಂಬ ಹೆಸರನ್ನು ಬಳಸಲು ನಾವು ಸ್ವತಂತ್ರವಾಗಿದ್ದೇವೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯವಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಎಂದಿದ್ದಾರೆ.

ಕೇರಳ 1965ರಿಂದಲೇ ಕೆಎಸ್​ಆರ್​ಟಿಸಿ ಟ್ರೇಡ್​ ಮಾರ್ಕ್​ನ್ನು ಬಳಸುತ್ತಿದೆ. ಕರ್ನಾಟಕ ಸರ್ಕಾರ 1973ರಿಂದ ಕೆಎಸ್​ಆರ್​​ಟಿಸಿ ಹೆಸರನ್ನು ಬಳಸುತ್ತಿದೆ. ಹೀಗಾಗಿ ನಾವು ಮೊದಲು ಕೆಎಸ್​ಆರ್​ಟಿಸಿ ಹೆಸರು ಬಳಸಿರುವುದರಿಂದ ನಮಗೆ ಈ ಟ್ರೇಡ್ ಮಾರ್ಕ್​ ಕೊಡಬೇಕೆಂದು ಕೇರಳ ಕಾನೂನು ಹೋರಾಟ ನಡೆಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದ ಅಧೀನದ ಟ್ರೇಡ್ ಮಾರ್ಕ್​ಗಳ ರಿಜಿಸ್ಟರ್​ಗೆ ಕೇರಳ ಸರ್ಕಾರ ಅರ್ಜಿ ಸಲ್ಲಿಸಿತ್ತು.

ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೆಸರಿನಲ್ಲಿ ಬಸ್​ಗಳು ರಸ್ತೆಗಿಳಿಯುತ್ತಿದ್ದವು. ಅತ್ತ ಕೇರಳದಲ್ಲಿ ಕೇರಳ ಸ್ಟೇಟ್ ರೋಡ್ ಟ್ರಾನ್ಸ್​ಪೋರ್ಟ್ ಹೆಸರಿನಲ್ಲಿ ರಸ್ತೆಗಿಳಿಯುತ್ತಿದ್ದ ಕೇರಳ ಸಾರಿಗೆ ಬಸ್​ಗಳು ಸಂಚರಿಸುತ್ತಿದ್ದವು. ಎರಡೂ ರಾಜ್ಯದ ಸಾರಿಗೆ ಸಂಸ್ಥೆ ಬಸ್​ಗಳು ಕೆಎಸ್ಆರ್​ಟಿಸಿ ಟ್ರೇಡ್ ಮಾರ್ಕ್ ಬಳಸುತ್ತಿದ್ದವು. 2014ರಲ್ಲಿ ಕೇರಳಕ್ಕೆ ಈ ಟ್ರೇಡ್ ಮಾರ್ಕ್ ಬಳಸದಂತೆ ಕೇರಳಕ್ಕೆ ಕರ್ನಾಟಕ ನೋಟಿಸ್ ಜಾರಿ ಮಾಡಿತ್ತು.

ಈ ಎರಡೂ ರಾಜ್ಯಗಳ ತಿಕ್ಕಾಟದ ಬಗ್ಗೆ ಸುದೀರ್ಘ 8 ವರ್ಷಗಳಿಂದ ನಡೆದಿದ್ದ ಕಾನೂನು ಹೋರಾಟದಲ್ಲಿ ಕೊನೆಗೆ ಅಂತಿಮವಾಗಿ ಕೇರಳಕ್ಕೆ ಜಯ ಸಿಕ್ಕಿತ್ತು. ಕೆಎಸ್​ಆರ್​ಟಿಸಿ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯ ಆಧಾರದಲ್ಲಿ ಟ್ರೇಡ್​ ಮಾರ್ಕ್ ರಿಜಿಸ್ಟ್ರಿ ಕೇರಳ ಸರ್ಕಾರಕ್ಕೆ ಕೆಎಸ್​ಆರ್​​ಟಿಸಿ ಟ್ರೇಡ್​​ ಮಾರ್ಕ್​ ನೀಡಿತ್ತು. ಆದರೆ, ಕರ್ನಾಟಕದಲ್ಲಿ ಕೆಎಸ್​ಆರ್​ಟಿಸಿ ಲೋಗೋ ಬಳಸಬಾರದು ಎಂದು ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

Exit mobile version