ಗದಗ: ಈಗಾಗಲೇ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಉತ್ತಮ ಮುಂಗಾರಿನ ನಿರೀಕ್ಷೆ ಇದೆ. ಕಳ್ಳ ಸಂತೆಯಲ್ಲಿ ಬೀಜ ಗೊಬ್ಬರ ಮಾರಾಟ ಮಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಅವರು ಈ ಕುರಿತು ನಗರದ ಖಾಸಗಿ ಹೊಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಉತ್ತಮ ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಸಿಇಓ, ಕೃಷಿ ಅಧಿಕಾರಿಗಳು, ತಹಶೀಲ್ದಾರ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗಿದೆ. ಜಿಲ್ಲೆಯ ರೈತರಿಗೆ ಬೀಜ, ಗೊಬ್ಬರ ಮೊದಲ ಆದ್ಯತೆಯಲ್ಲಿ ವಿತರಣೆ ಮಾಡಬೇಕು ಎಂದು ಸೂಚಿಸಿದರು.
ಇನ್ನು ಇದೇ ವೇಳೆ ಸಿಬಿಎಸ್ಇ ಪರೀಕ್ಷೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು. ಪಕ್ಷದಲ್ಲಿ ಅಶಿಸ್ತು ಪ್ರದರ್ಶಿಸುವವರ ಬಗ್ಗೆ ನನ್ನ ಅಭಿಪ್ರಾಯ ಕೇಳಿದರೆ ಪಕ್ಷದ ಸಭೆಯಲ್ಲಿ ಹೇಳುವೆ ಎಂದು ತಿಳಿಸಿದರು. ಸಚಿವ ಸಂಪುಟ ಪುನಾರಚನೆ ಕುರಿತು ಸಿಎಂ ಅವರಿಗೆ ಪರಮಾಧಿಕಾರವಿದೆ. ಈಗಾಗಲೇ ಎಲ್ಲ ಸಚಿವರಿಗೂ ಜಿಲ್ಲೆಯಲ್ಲಿದ್ದು ಕೋವಿಡ್ ನೊಯಂತ್ರಣದ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಕೊರೊನಾ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ಸೂಚಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಬಿಗಿ ಲಾಕ್ ಡೌನ್ ನಿಂದ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜನರ ಜೀವ ಸಂರಕ್ಷಣೆ ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಜನರ ಸಂಕಷ್ಟಕ್ಕೂ ಸ್ಪಂದಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬಡ ಜನರಿಗೆ ನಗರದ ಫಕ್ಕೀರಸಾ ಭಾಂಡಗೆ ಅವರು 2000 ಕಿಟ್ ಗಳನ್ನು ನೀಡಿದ್ದಾರೆ. ಇಂತಸ ಸೇವಾ ಗುಣ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದರು.
ಈ ವೇಳೆ ವಿಪ ಸದಸ್ಯ ಎಸ್.ವಿ.ಸಂಕನೂರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಕಷ್ಟಕ್ಕೊಳಗಾದ ಬಡವರಿಗೆ ಸಾವಿರಾರು ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಇನ್ನೇರಡು ದಿನಗಳಲ್ಲಿ ರಾಜ್ಯ ಸರ್ಕಾರ ಎರಡನೇ ಪ್ಯಾಕೇಜ್ ಘೋಷಣೆ ಮಾಡಲಿದೆ. ಇಂದು ಜನರಿಗೆ ಏನು ಕೊಟ್ಟರು ಕಡಿಮೆಯೇ ಎನ್ನುವಂತಾಗಿದೆ. ಇದಕ್ಕೆ ಕಾರಣ, ಈಗಾಗಲೇ ಲಾಕ್ ಡೌನ್ ನಿಂದ ದುಡಿಯುವ ಕೈಗಳು ಕೆಲಸ ಕಳೆದುಕೊಂಡಿವೆ. ಹೀಗಾಗಿ ಈ ಸಂಕಷ್ಟದಲ್ಲಿ ಜನರಿಗೆ ಮಠಮಾನ್ಯಗಳು, ಸಂಘ ಸಂಸ್ಥೆಗಳು, ಸಹಾಯ ಹಸ್ತ ಚಾಚಲು ಮುಂದೆ ಬಂದಿವೆ. ಶ್ರೀಮಂತರಲ್ಲಿ ದಾನ ಮಾಡುವ ಭಾವನೆ ಮೂಡಬೇಕಿದೆ. ಕಷ್ಟ ಕಾಲದಲ್ಲಿ ಉಳ್ಳವರು ಬಡವರ ಸಹಾಯಕ್ಕೆ ಮುಂದಾಗಬೇಕು. ಈ ಮೂಲಕ ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರವಿ ಶಿದ್ಲಿಂಗ್, ಪ್ರಶಾಂತ ನಾಯ್ಕರ್ ಸೇರಿದಂತೆ ಎಸ್.ಎಸ್.ಕೆ ಸಮಾಜದ ಬಂಧುಗಳು ಇದ್ದರು.
