ಗದಗ ಜಿಲ್ಲೆಗೆ ಶೇ.40 ರಷ್ಟು ಮಳೆಯ ಕೊರತೆ!: ಬಿತ್ತನೆಯಾಗಿದ್ದು ಶೇ.47 ರಷ್ಟು ಮಾತ್ರ!

ಗದಗ: ಜಿಲ್ಲೆಯಲ್ಲಿ ಈಗಾಗಲೇ ಕೆಲವೆಡೆ ಉತ್ತಮ ಮಳೆಯಾಗಿದ್ದು ಇನ್ನು ಕೆಲವು ಭಾಗದಲ್ಲಿ ಮಳೆಯ ದರ್ಶನವಾಗಿಲ್ಲ. ಮಳೆ ನೆಚ್ಚಿ‌ ಬಿತ್ತಿದ ರೈತನ ಆತಂಕ ಒಂದೆಡೆಯಾದರೆ ಕೆಲ ಭಾಗಗಳಲ್ಲಿ ಇನ್ನು ಬಿತ್ತಿಗೆಯೇ ಆರಂಭವಾಗಿಲ್ಲ. ಆದರೆ ಕೃಷಿ ಇಲಾಖೆ ಮಾಹಿತಿ‌ ಪ್ರಕಾರ ಜಿಲ್ಲೆಯಲ್ಲಿ ಶೇ.40 ರಷ್ಟು ಮಳೆಯ ಕೊರತೆ ಇದೆ.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧ್ಯಕ್ಷತೆಯಲ್ಲಿ
ಜಿಲ್ಲಾಡಳಿತ ಭವನದಲ್ಲಿಂದು ನಡೆದ ಕೃಷಿ ಇಲಾಖೆ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ಈ ಮಾಹಿತಿ ನೀಡಿದರು.

ಮಳೆಯ ವಿವರ
ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ 656.0 ಮಿ.ಮೀ. ಇದ್ದು, ಜೂನ್ ಅಂತ್ಯದವರೆಗೆ 193 ಮಿ,ಮೀ ವಾಡಿಕೆಗೆ 170ಮಿ.ಮೀ. (ಶೇ.88) ಮಳೆ ಆಗಿದೆ. ಕಳೆದ ತಿಂಗಳಲ್ಲಿ 88 ಮಿಮೀ ವಾಡಿಕೆ ಮಳೆಗಿಂತ 53 ಮಿ.ಮೀ. ಮಳೆಯಾಗಿದ್ದು, ಶೇ.40ರಷ್ಟು ಮಳೆಯ ಕೊರತೆ ಆಗಿರುವುದರಿಂದ ಬೆಳೆಗಳು ಬಾಡುತ್ತಿವೆ.

ಬಿತ್ತನೆ ಪ್ರಮಾಣ
ಮುಂಗಾರು ಹಂಗಾಮಿನ ಗುರಿ 28,0600 ಹೆಕ್ಟೆರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ 1,32,196 ಹೆಕ್ಟೆರ್ (ಶೇ. 47) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಜೋಳ 1,128 ಹೆಕ್ಟೆರ್, 22,439, ಹೆಸರು 75,935, ಶೇಂಗಾ 14,393, ಸೂರ್ಯಕಾಂತಿ 1,831 ಹಾಗೂ ಹತ್ತಿ 12,175 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದರು.

ಬೀಜ, ಗೊಬ್ಬರ ಕೊರತೆ ಇಲ್ಲ
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 20,000ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ ಇದ್ದು, ಬಿತ್ತನೆ ಬೀಜ ವಿತರಿಸಲು 11 ರೈತ ಸಂಪರ್ಕ ಕೇಂದ್ರಗಳು, 6 ಹೆಚ್ಚುವರಿ ಕೇಂದ್ರಗಳಲ್ಲಿ 5,563 ಕ್ವಿಂಟಾಲ್ ದಾಸ್ತಾನು ಮಾಡಲಾಗಿದೆ. ಅದರಂತೆ 4,206 ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗಿದ್ದು, 1,357 ದಾಸ್ತಾನು ಇದೆ. ಖಾಸಗಿ ಮಾರಾಟಗಾರರಲ್ಲಿ 12,794 ಕ್ವಿಂಟಾಲ್ ದಾಸ್ತಾನು ಮಾಡಲಾಗಿದ್ದು, 10,189 ಕ್ವಿಂಟಾಲ್ ಬೀಜ ವಿತರಣೆಯಾಗಿದೆ.

ಮುಂಗಾರು ಹಂಗಾಮಿಗೆ 41,112 ಮೆಟ್ರಿಕ್ ಟನ್ ರಾಸಾಯನಿಕ ಗೊಬ್ಬರಗಳ ಬೇಡಿಕೆ ಇದ್ದು, ಜೂನ್ ಅಂತ್ಯದವರೆಗೆ 30,079 ಮೆಟ್ರಿಕ್ ಟನ್ ದಾಸ್ತಾನು ಮಾಡಲಾಗಿದೆ. ಈಗಾಗಲೇ 17,102 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದ್ದು, 12,976 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

Exit mobile version