ಉತ್ತರಪ್ರದೇಶ್: ಪ್ರತಿಯೊಬ್ಬ ಹೆಣ್ ಮಕ್ಕಳು ಮನ್ಯಾಗ್ ತಂದಿ-ತಾಯಿ ಸಾಲಾಸೂಲಾ ಮಾಡಿ ಮದ್ವಿ ಮಾಡಿ, ಅಳಿಯಾ ಕೇಳೋವಷ್ಟು ವರದಕ್ಷಿಣೆ ಕೊಟ್ಟು ಮಗಳನ ಗಂಡನ್ ಮನಿಗೆ ಕಳಿಸಬೇಕು ಅನ್ನೋವಷ್ಟರಲ್ಲಿ ಹೈರಾಣಾಗಿ ಹೋಗುತ್ತ. ಉಷ್ ಅಪ್ಪಾ ಅಂತ ಮಗಳ್ ಮದ್ವಿ ಆದ್ರ ಸಾಕು ತಂದಿ-ತಾಯಿ ನಿಟ್ಟುಸಿರು ಬಿಡ್ತಾರಾ? ಆದರೆ ಇಲ್ಲೊಬ್ಬಳು ಹುಡುಗಿ ವರದಕ್ಷಣಿ ಅಂತ ನಂಗ್ ಬುಲೇಟ್ ಬೇಕಾಬೇಕು ಅಂತ ಪಟ್ಟು ಹಿಡಿದ ವರನಿಗೆ ತಕ್ಕ ಪಾಠಾ ಕಲಿಸ್ಯಾಳ.
ಬುಲೇಟ್ ಕೊಟ್ರ ನಾನು ತಾಳಿ ಕಟ್ ತೀನಿ ಅಂತ ಪಟ್ ಹಿಡಿದ್ ಕುಂತೋನಿಗೆ ನಿನ್ನಂಥಂಗ್ ನಾ ಮದ್ವಿ ಆಗಾಕ್ ವಲ್ಲೆ ಅಂತ್ಹೇಳಿ ಮದ್ವಿ ಮನಿಯಾಗಿಂದ ಹೊರಗ್ ಬಂದ ಘಟನೆ ಉತ್ತರ ಪ್ರದೇಶದ ಥಾನಾ ಜಿಲ್ಲೆಯೊಳಗ ನಡದೈತಿ.
ಬರೇಲಿ ಜಿಲ್ಲೆಯ ಸಮೀಪದ ಇಜ್ಜತ್ ನಗರ ನಿವಾಸಿ ಕುಲ್ಸೂಮ್ ಬಿ ಅವರಿಗೆ ಸಿಬಿ ಗಂಜ್ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಜೀಶನ್ ಅನ್ನೋರ್ ಕೂಡ ಮದ್ವಿ ನಿಗದಿಯಾಗಿತ್ತು. ವರ ಕುಲ್ಸೂಮ್ ಅವರ ಕುಟುಂಬ ಸಂಬಂಧಿಕರೊಂದಿಗೆ ಮೆರವಣಿಗೆಯೊಳಗ್ ಸಂಜೆ ವಧುವಿನ ಮನಿ ಬಾಗಿಲಿಗೆ ಬಂದ. ಆಗ ಮದ್ವೀ ಗಂಡು ವರದಕ್ಷಿಣೆ ರೂಪದಲ್ಲಿ ಬುಲೆಟ್ ಕೊಡಸತೀನಿ ಅಂತ ಒಪ್ಪಿಕೊಂಡ ಹುಡುಗಿ ಮನಿಯವರಿಗೆ ಎಲ್ಲೈತಿ ಬುಲೇಟ್ ಅಂತ ಕೇಳಿದ. ವಧುವಿನ ಅವರ ತಂದೆ ಬುಲೆಟ್ ಬುಕ್ಕೂ ಮಾಡಿದ್ದರು. ಆದರೆ ಕೊರೊನಾ ಅಬ್ಬರ ಹಾಗೂ ಲಾಕ್‌ಡೌನ್ ಕಾರಣ ಶೋರೂಂ ಬಂದ್ ಆಗಿದ್ರಿಂದ ಮದುವಿ ವ್ಯಾಳ್ಯಾದಾಗ ಬುಲೇಟ್ ಕೊಡಿಸೋದು ಭಾಳ್ ಕಷ್ಟದ್ ಕೆಲ್ಸಾ ಆಗಿತ್ತು. ಇದರಿಂದ ಭಾಳ್ ಸಿಟ್ಟಿಗೆದ್ದ ವರ ಮಹಾಶಯ ಬುಲೆಟ್ ಕೊಡ್ರಿ ಇಲ್ಲಂದ್ರ ಬುಲೇಟ್ ಗೆ ಎಷ್ಟಾಗುತ್ತೋ ಅಷ್ಟು ರೊಕ್ಕಾ ಕೊಡ್ರಿ ಅಂತ ಪಟ್ಟ್ ಹಿಡಿದ್ ಕುಂತ. ಪಾಪ.. ಹೆಣ್ಣಿನ್ ಕಡೆಯವ್ರು ಬುಲೇಟ್ ಬುಕ್ ಮಾಡಿದ ರಸೀದಿ ತೋರಿಸಿದ್ರು ಅಂವಾ ಏನು ಜುಮ್ ಅನಲಿಲ್ಲ. ನಂಗೇನೂ ಹೇಳಬ್ಯಾಡ್ರಿ ನಂಗೀಗ ಬುಲೇಟ್ ಬೇಕು ಅಂದ್ರ ಬೇಕಾ ಅಂತ ಹಟಕ್ ಬಿದ್ದ. ವರನ ಹಟದ್ ಗುಣ ನೋಡಿದ್ ವಧು, ಇಂಥವನ್ ಮದ್ವಿ ಆಗಾಕ್ ನಾ ವಲ್ಲೆ ಅಂತ ಖಾಡಾಮುಡಿಯಾಗಿ ಮದ್ವಿ ತಿರಸ್ಕಾರ ಮಾಡಿದ್ಲು.
ಅಷ್ಟೆಲ್ಲಾ ಎಪ್ಪಾ, ಎಣ್ಣಾ ಅಂತ ಗೋಗರೆದು ಹೇಳಿದ್ರು ಕೇಳದ್ ವರ, ವಧುವಿನ ನಿರ್ಧಾರದಿಂದ ಇಂಗ್ ತಿಂದ್ ಮಂಗ್ಯಾನಂಗಾಗಿ ಹ್ವಾದ.
ಬುಲೆಟ್ ಕೊಟ್ರ ತಾಳಿ ಕಟ್ತಿನಿ ಅಂತ ಪಟ್ಟು ಹಿಡಿದ ವರನಿಗೆ ಏನಾತು ನೋಡ್ರಿ.

ಬುಲೆಟ್ ಕೊಟ್ರ ತಾಳಿ ಕಟ್ತಿನಿ ಅಂತ ಪಟ್ಟು ಹಿಡಿದ ವರನಿಗೆ ಏನಾತು ನೋಡ್ರಿ..