ಗದಗ ಜಿಲ್ಲೆಯ ಪಶುವೈದ್ಯರ ಕೊರತೆ ಕುರಿತು ಪರಿಷತ್ತಿನಲ್ಲಿ ಪ್ರತಿಧ್ವನಿ

ಗದಗ: ಜಿಲ್ಲೆಯಲ್ಲಿ ಪಶು ಚಿಕಿತ್ಸಾಲಯಕ್ಕೆ ವೈದ್ಯರ ಕೊರತೆಯಿದ್ದು, ಖಾಲಿ ಹುದ್ದೆ ಭರ್ತಿಗೆ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ ಕೋರಿದರು.
ಅವರು ಈ ಕುರಿತು ವಿಧಾನ ಪರಿಷತ್ತಿನಲ್ಲಿ ಸದನದ ಶೂನ್ಯ ಅವಧಿಯಲ್ಲಿ ಪ್ರಶ್ನಿಸಿ ಶೇ.70ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದನ್ನು ಸದನದ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಒಟ್ಟು 88 ಪಶು ಆಸ್ಪತ್ರೆಗಳು ಹಾಗೂ ಪಶು ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿವೆ.
ಈ ಆಸ್ಪತ್ರೆಗಳಿಗೆ ಒಟ್ಟು ಪಶು ವೈದ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ ಒಟ್ಟು 384 ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 135 ಹುದ್ದೆ ಭರ್ತಿಯಾಗಿದ್ದು, 749 ಹುದ್ದೆಗಳು ಖಾಲಿ ಇರುತ್ತವೆ. ಪಶು ಆಸ್ಪತ್ರೆಗಳಲ್ಲಿ ಶೇ.70 ರಷ್ಟು ಹುದ್ದೆಗಳು ಖಾಲಿ ಇರುವುದರಿಂದ ಜಾನುವಾರುಗಳಿಗೆ ಸಿಬ್ಬಂದಿ ಕೊರತೆಯಿಂದ ಸೂಕ್ತ ಚಿಕಿತ್ಸೆ ಲಭಿಸುತ್ತಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಅನೇಕ ರೈತರು ತಮ್ಮ ಜಾನುವಾರುಗಳನ್ನು ಕಳೆದುಕೊಂಡಿರುವ ಘಟನೆಗಳು ನಡೆದಿವೆ.
ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದ್ದರೂ ಕೂಡ ಪಶು ವೈದ್ಯರಾಗಿ ನೇಮಕಗೊಂಡ ವೈದ್ಯರುಗಳನ್ನು ಜಿಲ್ಲೆಯಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಿದ್ದು ರೈತರ ಅಸಮದಾನಕ್ಕೆ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ನಿಯೋಜನೆಗೊಂಡAತಹ ಪಶು ವೈದ್ಯರನ್ನು ಪುನ: ಮಾತೃ ಇಲಾಖೆಗೆ ವಾಪಸ್ಸು ಕರೆಸಿಕೊಳ್ಳಲು ರೈತರು ಒತ್ತಾಯಿಸಿರುವರು.
ಒಟ್ಟಾರೆ, ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಪಶು ವೈದ್ಯರ, ಜಾನುವಾರು ಅಭಿವೃದ್ಧಿ ಅಧಿಕಾರಿಗಳ, ಪಶು ವೈದ್ಯಕೀಯ ಪರೀಕ್ಷಕರ ಮುಂತಾದ ಹುದ್ದೆಗಳನ್ನು ಸರ್ಕಾರ ಕೂಡಲೇ ತುಂಬಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಪಶು ವೈದ್ಯರನ್ನು ಮತ್ತೊಂದು ಇಲಾಖೆಗೆ ನಿಯೋಜನೆ ಮಾಡಿರುವುದನ್ನು ತಕ್ಷಣ ರದ್ದುಪಡಿಸಿ ಮಾತೃ ಇಲಾಖೆಗೆ ವಾಪಸ್ಸು ಕರೆಸಿಕೊಳ್ಳಲು ಕ್ರಮ ಜರುಗಿಸಲು ವಿಧಾನ ಪರಿಷತ್ ಸದಸ್ಯ ಸಂಕನೂರ ಒತ್ತಾಯಿಸಿದ್ದಾರೆ.

Exit mobile version