ಹಕ್ಕಿ ಜ್ವರದ ಆತಂಕದ ನಡುವೆಯೇ ಗದಗ ಜಿಲ್ಲೆಯಲ್ಲಿ ಹಕ್ಕಿಗಳ ಸಾವು

ಡಂಬಳ : ಇದೀಗ ಹಕ್ಕಿ ಜ್ವರದ ಸುದ್ದಿಯೇ ಸದ್ದು ಮಾಡುತ್ತಿದೆ. ಜನರು ಈ ಆತಂಕದಲ್ಲಿರುವಾಗಲೇ ಗದಗ ಜಿಲ್ಲೆ ಡಂಬಳ ಗ್ರಾಮದಲ್ಲಿ ಹಕ್ಕಿಗಳು ಏಕಾಏಕಿ ಸಾವನ್ನಪ್ಪಿರುವುದು ಇಲ್ಲಿನ ಜನರನ್ನು ಗಾಬರಿಗೊಳಿಸಿದೆ. ಡಂಬಳ ಗ್ರಾಮದ ಪ್ರವಾಸಿ ಮಂದಿರದ ಅಕ್ಕಪಕ್ಕದ ಜಮೀನಿನಲ್ಲಿ ಏಕಾಏಕಿ ಸತ್ತು ಬಿದ್ದ ಹತ್ತಾರು ಹಕ್ಕಿಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಪಕ್ಷಿಗಳ ಸಾವಿಗೆ ನಿಖರ ಕಾರಣ ಇನ್ನೂ ಗೋತ್ತಾಗಿಲ್ಲ. ಮುಂಡರಗಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಘಟನೆ ನಡೆದು 3 ಗಂಟೆಗಳ ನಂತರ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪಶು ಆಸ್ಪತ್ರೆ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಬಂದು ಪರಿಶೀಲನೆ ನಡೆಸಿದರು. ಸಾವನ್ನಪ್ಪುತ್ತಿರುವ ಹಕ್ಕಿಗಳ ಮಾದರಿಯನ್ನು ಅಧಿಕಾರಿಗಳು ಸಂಗ್ರಹಿಸಿದ್ದು, ಪಕ್ಷಿಗಳ ಸಾವಿಗೆ ನಿಖರ ಕಾರಣ ಮಾತ್ರ ತಿಳಿದಿಲ್ಲ. ಹಕ್ಕಿಗಳ ಸಾವಿನ ಬಗ್ಗೆ ನಿಖರ ಮಾಹಿತಿ ಪಡೆದು ಶೀಘ್ರ ಪರಿಹಾರಕ್ಕೆ ಸಂಬಂಧಿಸಿದ ಇಲಾಖೆ ಮುಂದಾಗಬೇಕಿದೆ ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

Exit mobile version