ಶೆಟ್ಟಿಕೇರಿ ಕೆರೆ: ಪಾರಂಪರಿಕ ತಾಣವನ್ನಾಗಿಸಲು ಅಗತ್ಯದ ಕ್ರಮ

ಗದಗ: ಜೀವ ವೈವಿಧ್ಯತೆಯ ಸಂರಕ್ಷಣೆ ಸಂವರ್ಧನೆಯ ಕಾಯ್ದೆಯ ಸಮರ್ಪಕ ಜಾರಿಗಾಗಿ ಜಿ.ಪಂ, ತಾ.ಪಂ ಮೂಲಕ ಸಮಿತಿಗಳನ್ನು ರಚಿಸಿದ್ದು ಈ ಸಮಿತಿಗಳ ಮೂಲಕ ಜಿಲ್ಲೆಯಲ್ಲಿನ ಜೀವ ವೈವಿಧ್ಯತೆಯನ್ನು ಬಲಪಡಿಸುವುದು ಅಗತ್ಯ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜೀವ ವೈವಿಧ್ಯತೆಯ ಸಂರಕ್ಷಣೆಯ ಉದ್ದೇಶದಿಂದ ಊರಿನ ಕೆರೆ, ಭಾವಿ, ಹಳ್ಳ-ಕೊಳ್ಳ, ಬೆಟ್ಟ, ನದಿ ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕು. ಪಂಚಾಯತ್‌ಗಳು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ 10 ಸ್ಥಳ ಆಯ್ಕೆ ಮಾಡಿ, 5 ಪಾರಂಪರಿಕ ಜೀವ ವೈವಿಧ್ಯತಾ ಸ್ಥಳಗಳನ್ನಾಗಿ ಘೋಷಿಸಿದೆ. ಜಿಲ್ಲೆಯ ಕಪ್ಪತಗುಡ್ಡ, ಮಾಗಡಿ ಕೆರೆ ಮುಂತಾದವುಗಳ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದರು. ಜಿಲ್ಲೆಯ ಲಕ್ಷ್ಮೆಶ್ವರ ತಾಲೂಕಿನ ಶೆಟ್ಟಿಕೆರೆಯನ್ನು ಪಾರಂಪರಿಕ ತಾಣವನ್ನಾಗಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಜಿಲ್ಲೆಯ 250 ಕೆರೆಗಳ ಸರ್ವೆ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ನದಿಯಂಚಿನಲ್ಲಿರುವ ಪ್ರದೇಶಗಳನ್ನು ನಶಿಸದಂತೆ ಅವಶ್ಯಕ ಕ್ರಮಕೈಗೊಳ್ಳಲಾಗುವದು. ಕೇಂದ್ರ ಔಷಧಿ ಮಂಡಳಿಯಿಂದ ಪ್ರತಿ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುವ ಮಗರಳ ಪ್ರಬೇಧ, ಅಳಿವಿನಂಚಿನಲ್ಲಿರುವ ಮರಗಳ ಪ್ರಬೇಧಗಳ ಪಟ್ಟಿಯನ್ನು ತಯಾರಿಸಿದ್ದು, ಅದರನ್ವಯ ಅಂತಹ ಮರಗಳ ಅಭಿವೃದ್ಧಿಗೆ ಮಾಹಿತಿ ಒಗದಿಸಲಾಗುವುದು ಎಂದರು. ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನು ಸೂಕ್ತವಾಗಿ ವಿಲೇವಾರಿ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಅಗತ್ಯದ ಕ್ರಮ ಕೈಗೊಳ್ಳಬೇಕು. ಹಸಿ ಕಸವನ್ನು ಬಯೋ-ಗ್ಯಾಸ್ ಆಗಿ ಪರಿವರ್ತಿಸುವಂತೆ ಜನಜಾಗೃತಿ ಮೂಡಿಸಲು ಸೂಚಿಸಲಾಗಿದೆ ಎಂದು ನುಡಿದರು.

ಪತ್ರಿಕಾ ಗೋಷ್ಠಿಯಲ್ಲಿ ವಿಜ್ಞಾನಿಗಳಾದ ಕೇಶವಮೂರ್ತಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version