ಗದಗ: ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದನ್ನು ತೀರ್ವವಾಗಿ ಖಂಡಿಸುತ್ತದೆ ಎಂದು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಹೇಳಿದರು.
ನಗರದ ಪತ್ರಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಜನರ ಮೇಲೆ ಅನಗತ್ಯ ಬೆಲೆ ಏರಿಕೆ ಹೊರೆಯನ್ನು ಹೊರಿಸಿದೆ. ನಿರಂತರವಾಗಿ ತೈಲೋತ್ಪನ್ನಗಳ ಬೆಲೆ ಹೆಚ್ಚಳವಾಗಿದ್ದರಿಂದ ಮಧ್ಯಮ ವರ್ಗದವರು, ಬಡವರು ದಿನ ದೂಡುವುದೇ ಕಷ್ಟವಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ಕೇಂದ್ರ ಸರ್ಕಾರ ಬೆಲೆ ಹೆಚ್ಚಳ ಮಾಡುತ್ತಿದೆ. ಸರ್ಕಾರಿ ಸ್ವಾಮ್ಯದ ಲಾಭದಾಯಕ ಉದ್ಯಮಗಳನ್ನು ತಮ್ಮ ಕಾರ್ಪೊರೇಟ್ ಗೆಳೆಯರಿಗೆ ಮೋದಿ ಅವರು ಅಗ್ಗದ ಬೆಲೆಗೆ ಹಸ್ತಾಂತರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಒಂದೇ ತಿಂಗಳಲ್ಲಿ 4 ಬಾರಿ ಗ್ಯಾಸ್ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ದುಡಿದ ಹಣ ಉಳಿಸುವುದಿರಲಿ, ತಿಂಗಳ ಮನೆ ನಿರ್ವಹಣೆ ನಡೆಸುವುದೂ ಬಡ ಜನರಿಗೆ ಕಷ್ಟವಾಗಿದೆ. ಅಂಗೈಯಲ್ಲಿ ಆಕಾಶ ತೋರಿಸುವ ಮಾತಲ್ಲೇ ಮಂಟಪ ಕಟ್ಟುವ ಬಣ್ಣದ ಮಾತುಗಳು ಜನರ ಹೊಟ್ಟೆ ತುಂಬಿಸುವುದಿಲ್ಲ. ಈ ಸತ್ಯವನ್ನು ಮೋದಿಯವರು ಇನ್ನಾದರೂ ಅರ್ಥ ಮಾಡಿಕೊಳ್ಳಲಿ ಆಕ್ರೋಶ ಹೊರಹಾಕಿದರು.
10 ಕೋಟಿ ಯುವಜನರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರಿ ಸಂಸ್ಥೆಗಳು ಖಾಸಗೀಕರಣದಿಂದ ಬಂಡವಾಳಶಾಹಿಗಳ ಪಾಲಾಗುತ್ತಿವೆ. ಪೆಟ್ರೋಲ್, ಇಂಧನ ದರ ಏರಿಕೆಯಿಂದ ಪ್ರತಿಯೊಂದು ಸಾಮಗ್ರಿಗಳ ಬೆಲೆ ತುಟ್ಟಿಯಾಗುತ್ತಿದೆ. ಕೂಲಿ ಕಾರ್ಮಿಕರು, ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಧಾನಿ ಮೋದಿ ಅವರು ಸರ್ವಾಧಿಕಾರಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸರ್ಕಾರದ ನಡೆ ಪ್ರಶ್ನಿಸಿದರೆ, ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತಿದೆ. ಸಾಕ್ಷ್ಯಗಳಿಲ್ಲದೆ ದಿಶಾ ರವಿಯನ್ನು ಬಂಧಿಸಿ, ದೇಶದ್ರೋಹದ ಪಟ್ಟ ಕಟ್ಟಲು ಯತ್ನಿಸಲಾಯಿತು ಸರ್ಕಾರದ ವಿರುದ್ಧ ಮಾತಿನ ಚಾಟಿ ಬೀಸಿದರು.
ಕೃಷಿ ಕಾಯ್ದೆಗಳು ರೈತರ ಪರ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಮೊದಲಿಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಕಾಯ್ದೆ ಅನುಷ್ಠಾನಕ್ಕೆ ತರಲಿ. ಆ ಕಾಯ್ದೆಗಳಿಂದ ಯಾವುದೇ ತೊಂದರೆ ಇಲ್ಲ ಎಂಬುದು ರೈತರಿಗೆ ಖಚಿತವಾದ ಮೇಲೆ ದೇಶದಾದ್ಯಂತ ಜಾರಿಗೊಳಿಸಲಿ. ಈ ಕರಾಳ ಕಾಯ್ದೆಗಳ ವಿರುದ್ಧ ಹಳ್ಳಿ-ಹಳ್ಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸಲು ಚಳವಳಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯ ಕಾರ್ಯದರ್ಶಿ ಆದಿಲ್ ಪಟೇಲ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಜಿಲ್ಲಾಧ್ಯಕ್ಷ ಜುನೇದ್ ಉಮಚಗಿ, ಇಸ್ಮಾಯಿಲ್ ರೋಣ, ಮುಸ್ತುಫಾ ಶಿರಹಟ್ಟಿ, ರಶೀದ್ ಗೋಕವಿ, ಆರಿಫ್ ಹುನಗುಂದ ಮುಂತಾದವರು ಉಪಸ್ಥಿತರಿದ್ದರು.
