ಅಡುಗೆ ಅನಿಲದ ಬೆಲೆ ಏರಿಕೆ, ಬಡವರ ಮೇಲೆ ಕೇಂದ್ರದ ಗಧಾಪ್ರಹಾರ: ಎಂ.ಎಸ್.ಹಡಪದ ಆಕ್ರೋಶ

ಗಜೇಂದ್ರಗಡ: ದಿನದಿಂದ ದಿನಕ್ಕೆ ಅಡುಗೆ ಅನಿಲ ಬೆಲೆ ಏಕಾಏಕಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗ್ರಾಹಕರನ್ನು ತತ್ತರಿಸುವಂತೆ ಮಾಡುತ್ತಿದೆ. ಕೇಂದ್ರದ ಆಡಳಿತ ಬಡವರ ಮೇಲಿನ ಗಧಾಪ್ರಹಾರದ ಆಡಳಿತವಾಗಿದೆ ಎಂದು ಸಿಪಿಐಎಂ ಮುಖಂಡ ಎಂ.ಎಸ್.ಹಡಪದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುಗತಿಯಲ್ಲಿ ಸಾಗಿದ್ದು, ಇದೀಗ ಎಲ್‌ಪಿಜಿ ದರ ಮತ್ತೊಮ್ಮೆ 50 ರೂಪಾಯಿ ಏರಿಕೆ ಕಂಡಿದೆ. ಈ ಹೊಸ ದರ ನಿನ್ನೆ ರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಇದರಿಂದ ಸಾಮಾನ್ಯ ವರ್ಗದವರ ಮೇಲೆ, ತೀವೃತರವಾದ ಪರಿಣಾಮ ಬೀರುತ್ತಿದೆ. ಒಂದೆಡೆ ಹೊಗೆ ಮುಕ್ತ ಸಮಾಜ ಮಾಡುವ ಹೆಸರಿನಲ್ಲಿ ಉಚಿತ ಗ್ಯಾಸ ನೀಡಿ, ಇನ್ನೊಂದೆಡೆ ಅಡುಗೆ ಅನಿಲ ಬೆಲೆ ದುಪ್ಪಟ್ಟು ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದವರನ್ನು ಕೊಳ್ಳೆ ಹೊಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ಇತ್ತೀಚೆಗೆ ಕೇಂದ್ರ ಸರ್ಕಾರ ಬಡವರ ಹೊಟ್ಟೆ ಮೇಲೆ ಬರೆ ಎಳೆಯವಂತಹ ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದು ಒಂದೆಡೆಯಾದರೆ, ರಾತ್ರೋರಾತ್ರಿ ಎಲ್‌ಪಿಜಿ ಸಬ್ಸಿಡಿ ದರ ಕಡಿತದೊಂದಿಗೆ ಹೆಚ್ಚುವರಿಯಾಗಿ 50 ರೂಪಾಯಿ ಏರಿಕೆ ಮಾಡಿದ್ದು, ಬಿಜೆಪಿ ಸರ್ಕಾರದ ಈ ದಿಡೀರ ನಿರ್ಧಾರ ದೇಶದ ಜನರ ಮೇಲೆ ಮಾರಕವಾಗಿದೆ ಎಂದು ಆರೋಪಿಸಿದರು.

ರೂ. 621 ನೆಲೆ ಇದ್ದ ಗ್ಯಾಸ್, ಇದೀಗ ಏಕಾಏಕಿ ರು 681ಕ್ಕೆ ಏರಿಕೆಯಾಗಿದೆ. ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸೀಡಿ ಸಹ ಕೇಂದ್ರ ಸರ್ಕಾರ ಸದ್ದಿಲ್ಲದೇ, ರದ್ದುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಣ್ಣದ ಮಾತುಗಳಿಗೆ ಮರುಳಾದ ದೇಶದ ಜನರಿಗೆ ಕೇಂದ್ರ ನೀಡುತ್ತಿರುವ ಬಂಪರ್ ಕೊಡುಗೆಗಳಾಗಿವೆ. ಕೂಡಲೇ ಇಂತಹ ಬೆಲೆ ಏರಿಕೆಯ ನಿರ್ಧಾರಗಳನ್ನು ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.

Exit mobile version