80 ವರ್ಷದ ವೃದ್ಧಗ 80 ಕೋಟಿ ಕರೆಂಟ್ ಬಿಲ್ ಬಂದೈತಿ!

ಮುಂಬೈ: ಮನ್ಯಾಕ್ ಕಾಡೋ ಮಕ್ಕಳ್ ಕೈಯಾಗ್ ರೂಪಾಯಿ, ಎರಡ ರೂಪಾಯಿ ಕೊಡಾಕ ನಾವು ಹಿಂದ್-ಮುಂದ್ ನೋಡತಿವಿ. ಅಂಥಾದ್ರಾಗ‌ ಏಕಾಎಕಿ ತಿಂಗಳಿಗೊಮ್ಮೆ ಕಟ್ಟೋ ಬಿಲ್ ಕೋಟಿಗಟ್ಟಲೇ ಬಂದ್ರ ಬಿಲ್ ನೋಡಿದವ್ರ ಸ್ಥಿತಿ ಹ್ಯಾಂಗಾಗಿರಬಾರ್ದು. ಪ್ರತಿ ತಿಂಗಳು ಬರುವ ಕರೆಂಟ್ ಬಿಲ್ ನ್ಯಾಗ ಸ್ವಲ್ಪ ಬೆಲೆ ಹೆಚ್ಚಾದ್ರೂ ಏನೋ ಒಂಥರಾ ಕಸಿವಿಸಿ ಶುರುವಾಕ್ಕೈತಿ. ಒಂದು ವೇಳೆ ಸಾವಿರ ರೂಪಾಯಿ ಒಳಗೆ ಬರಬೇಕಿದ್ದ ಕರೆಂಟ್ ಬಿಲ್ ಕೋಟಿಗಟ್ಟಲೇ ಬಂದ್ರ ಬಿಲ್ ನೋಡೊದವ್ರ ಸ್ಥಿತಿ ಏನಾಗಿರಬಾರದು?

ಒಂದಲ್ಲಾ… ಎರಡಲ್ಲಾ… 80 ಕೋಟಿ ರೂಪಾಯಿ ಕರೆಂಟ್ ಬಿಲ್ ಬಂದ್ರ?

ಹಾರ್ಟ್ ವೀಕ್ ಇದ್ದವರಿಗೆ ಹೃದಯ ಬಡಕೊಳ್ಳದ ನಿಂತ್ರು ನಿಲ್ಲಬಹುದೇನೋ. ಇಂಥದ್ದೊಂದು ಗದ್ದಲಕ್ಕ್ ೮೦ ವರ್ಷದ ಗಣಪತಿ ನಾಯಕ್ ಎನ್ನೋರು ಬಿದ್ದಾರ.  ಆದರೆ ಪುಣ್ಯಕ್ಕೆ ಅವರ ಹೃದಯ ಬಡಿತ ನಿಲ್ಲಲಿಲ್ಲ. ಆದ್ರ ಹೃದಯ ಬಡಿತದಾಗ ಏರುಪೇರಾಗಿ ಆಸ್ಪತ್ರೆಗೆ ಅಡ್ಮಿಟ್ ಆಗ್ಯಾರಂತ.

ಮಹಾರಾಷ್ಟ್ರದ ನಲ್ಸೊಪರ್ ಪಟ್ಟಣದ  ಗಣಪತಿ, ಈ ತಿಂಗಳ ಬಿಲ್ ನೋಡಿ ಹೌಹಾರಿ ಹೋಗ್ಯಾರ. ಅದಕ್ಕೆ ಕಾರಣ, 80 ಕೋಟಿ ರೂಪಾಯಿ ಎಂದು ಬಿಲ್ ನ್ಯಾಗ ದಾಖಲಾಗೈತಿ.

ಇದು ವಿದ್ಯುತ್ ಕಂಪೆನಿಯ ಸಿಬ್ಬಂದಿಯ ಎಡವಟ್ಟಿನಿಂದ ಆಗಿದ್ದು ಅಂತ ತಿಳಿದು ಬಂದೈತಿ. ಆದರೆ ಅವರು ಅಂದುಕೊಂಡದ್ದು ಏನೆಂದರೆ ಇಡೀ ಊರಿನ ಬಿಲ್ ಸೇರಿಸಿ ತಪ್ಪಾಗಿ ತಮ್ಮ ವಿಳಾಸಕ್ಕೆ ಕಳುಹಿಸಿರಬಹದು ಅಂತ.

ಅದಕ್ಕಾಗಿ ಗಣಪತಿಯವರು ಮತ್ತೊಮ್ಮೆ ಬಿಲ್ ಸರಿಯಾಗಿ ಕಣ್ಣಾಡಿಸಿ ನೋಡ್ಯಾರ. ಆಮೇಲೆ ಖಾತ್ರಿಯಾದ ಮೇಲೆ ಹೃದಯ ಬಡಿತ ಹೆಚ್ಚಾಗಿದೆ. ಯಾಕಂದ್ರ ಅದರಲ್ಲಿ ಸ್ಪಷ್ಟವಾಗಿ ಇವರ ಮನೆಯ ನಂಬರ್ ಮಾತ್ರ ಇತ್ತು. ಇದು ಇವರೊಬ್ಬರ ಮನೆಯ ವಿದ್ಯುತ್ ಬಿಲ್ ಆಗಿತ್ತು.

ಅದನ್ನು ನೋಡಿ ಟೆನ್ಷನ್ ಆಗಿ ಗಣಪತಿ ಅವ್ರು, ಎಚ್ಚರ ತಪ್ಪಿ ಬಿದ್ದುಬಿಟ್ಟರಂತ. ನಂತರ ಅವರ ಮೊಮ್ಮಗ ನೀರಜ್, ಅವರನ್ನು ದವಾಖಾನಿಗೆ ಅಡ್ಮಿಟ್ ಮಾಡಿದ್ರಂತ. ಚಿಕಿತ್ಸೆ ಪಡೆದು ಗುಣಮುಖರಾದ ಮೇಲೆ ಕೆಲವು ಹಿರಿಯಾರ ಕೂಡ ಅವ್ರು ವಿದ್ಯುತ್ ನಿಗಮಕ್ಕ ಭೇಟಿ ಕೊಟ್ಟಾರ.

ನಂತರ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಅಧಿಕಾರಿಗಳು ಇವರಿಗೆ ಕ್ಷಮೆ ಕೇಳ್ಯಾರಂತ. ಮೀಟರ್ ರೀಡಿಂಗ್ ತೆಗೆದುಕೊಳ್ಳುವ ಏಜೆನ್ಸಿಯ ದೋಷ ಇದ್ದಿದ್ರಿಂದ ಹಿಂಗಾಗೈತಿ ಅಂತ ತಿಳಿಸಿ ಕ್ಷಮೆ ಕೇಳಿವಿ ಅಂತ  ಅಧಿಕಾರಿ ಸುರೇಂದ್ರ ಮೊರೆನ್ ತಿಳಿಸ್ಯಾರ. ಏಜೆನ್ಸಿ ಆರು ಅಂಕಿ ಬದಲಿಗೆ ಒಂಭತ್ತು ಅಂಕಿಗಳ ಬಿಲ್ ತಯಾರಿಸೈತಿ. ಇದರಿಂದ ಆಗಿರುವ ಎಡವಟ್ಟು ಇದು. ಗಣಪತಿಯವರಿಗೆ ಸರಿಯಾದ ಬಿಲ್ ಆಮೇಲೆ ಕೊಟ್ಟಿವಿ ಅಂತ ತಿಳಿಸ್ಯಾರ.

ವಿದ್ಯುತ್ ನಿಗಮದ ಎಡವಟ್ಟಿನಲ್ಲಿ ಈ ವಯೋವೃದ್ಧರಿಗೇನಾದರೂ ಅಪಾಯ ಆಗಿದ್ರ ಯಾರು ಜವಾಬ್ದಾರರಾಗುತಿದ್ರು.? ಎಂದು ಜನರು ಸಿಟ್ ಗೆದ್ದು ಮಾತಾಡಿದ್ರು.

Exit mobile version