ನರೇಗಲ್: ಕೋಡಿಕೊಪ್ಪದ ಹುಚ್ಚೀರಪ್ಪಜ್ಜನ ರಥೋತ್ಸವವು ಸೋಮವಾರ ಸಂಜೆ ಸಾವಿರಾರು ಭಕ್ತರ ನಡುವೆ ಅದ್ದೂರಿಯಾಗಿ ವೈಭವದಿಂದ ಜರುಗಿತು.
ಬೆಳಗ್ಗೆ 6 ರಿಂದ ಜಾತ್ರೆಯ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪಟ್ಟಣದ ಸಂಕನಗೌಡ್ರ ಮನೆಯಿಂದ ತೇರಿನ ಕಳಸ ಹಾಗೂ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಸಿದ್ನೇಕೊಪ್ಪ ಗ್ರಾಮದಿಂದ ಭಕ್ತಿ ಪೂರ್ವಕವಾಗಿ ಮೆರವಣಿಗೆ ಮೂಲಕ ಭಕ್ತರು ರಥಕ್ಕೆ ಹಗ್ಗ ತಂದು ಶೃಂಗರಿಸಿದರು.
ಸAಜೆ 6ಕ್ಕೆ ಮಹಾರಥವನ್ನು ಭಕ್ತ ಮಹಾಸಾಗರ ಮಠದಿಂದ ಪಾದಗಟ್ಟಿಯವರೆಗೆ ವಿಜೃಂಭಣೆಯಿAದ ಎಳೆದರು. ಮೆರವಣಿಗೆ ಉದ್ದಕ್ಕೂ ಭಕ್ತರು ಹಠಯೋಗಿ ವೀರಪ್ಪಜ್ಜನವರಿಗೆ ಜೈ, ತ್ರಿಲೋಕಜ್ಞಾನಿ ಹುಚ್ಚೀರಪ್ಪಜ್ಜಗೆ ಜೈ ಎಂದು ಜಯಘೋಷ ಹಾಕಿದರು.
ರಥೋತ್ಸವದಲ್ಲಿ ಭಜನೆ, ಜಾಂಜ್ ಮೇಳ, ಡೊಳ್ಳು ಕುಣಿತ, ಕರಡಿ ಮಜಲು, ನಂದಿಕೋಲು ನೋಡುಗರ ಗಮನ ಸೆಳೆದವು. ಭಕ್ತರು ಭಕ್ತಿ ಭಾವದಿಂದ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ನಮನ ಸಲ್ಲಿಸಿದರು.
ರಥವು ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಚಪ್ಪಾಳೆ ತಟ್ಟಿದ ಭಕ್ತರು ಭಕ್ತಿಭಾವ ಮೆರೆದರು. ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಕಾಯಿ ಒಡೆಸಿ, ನೈವೇದ್ಯ ಮಾಡಿದರು.
ಜಾತ್ರೆಗೆ ಗಜೇಂದ್ರಗಡ, ಗದಗ, ರೋಣ, ಗುಜಮಾಗಡಿ, ಜಕ್ಕಲಿ, ಮಾರನಬಸರಿ, ಹಾಲಕೆರೆ, ತೋಟಗಂಟಿ, ಡ.ಸ.ಹಡಗಲಿ, ಯರೆಬೇಲೇರಿ, ನಿಡಗುಂದಿಕೊಪ್ಪದ, ರೋಣ, ಕೊತಬಾಳ, ಅಣ್ಣಿಗೇರಿ, ಯಲಬುರ್ಗಾದ ವಿವಿಧ ಭಾಗಗಳಿಂದ ಟ್ರಾಕ್ಟರ್, ಎತ್ತಿನ ಬಂಡಿ ಮತ್ತು ಪಾದಯಾತ್ರೆ ಮೂಲಕ ಬಂದು ವೀರಪ್ಪಜ್ಜನ ದರ್ಶನವನ್ನು ಪಡೆದು ಹರಕೆ ತೀರಿಸಿದರು.
