ನಿನ್ನ ರೂಪವಷ್ಟೇ ಸುಂದರವಾಗಿಲ್ಲ ಕಣೋ. ನಿನ್ನ ಮನಸ್ಸು ಕೂಡ ಅತ್ಯದ್ಭುತವಾಗಿದೆ. ನನ್ನೆದುರು ಪ್ರೀತಿಯ ಮಾತುಗಳು ಹೇಳಲು ಯಾಕೋ ಹೆದರುತ್ತಿದ್ದಿಯಾ. ಒಂದು ಬಾರಿ ಹೇಳಿಬಿಡು. ಆ ಮಾತುಗಳನ್ನು ನಿನ್ನ ಬಾಯಿಂದ ಕೇಳಲೆಂದು ನನ್ನ ಮನಸ್ಸು ಪ್ರತಿ ಕ್ಷಣ ತವಕದಲ್ಲಿ ಕಾದು ನಿಂತಿದೆ.
ದಿನವೂ ನನ್ನ ದಾರಿಯನ್ನೇ ನೀನು ಕಾಯುತ್ತಿರುತ್ತಿರುತ್ತಿಯಲ್ಲ. ನಾನು ಒಂದು ಕ್ಷಣ ಕನ್ಣಿಗೆ ಕಾಣದಿದ್ದರೆ ನೀ ಪಡೋ ಸಂಕಟ ನೋಡಲಾಗದಂತದ್ದು. ನಾ ಬರುವ ಬಸ್ಸಿನಲ್ಲಿಯೇ ನೀನು ಬರುವೆ. ಹಿಂದೆ ಬಂದು ಕದ್ದು ಮುಚ್ಚಿ ನನ್ನ ಮುಖವನ್ನು ನೋಡುವೆ. ನಾ ನಿನ್ನ ನೋಡಿದರೆ ಮುಖವನ್ನು ತಿರುಗಿಸುವೆ ಯಾಕೆ. ಪೆದ್ದ ಇಷ್ಟೊಂದು ಭಯ ಪಡುವುದಾದರೆ ನನ್ನನ್ನು ಪ್ರೀತಿಸುವುದಾದರೂ ಏಕೆ. ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ ಅಂತ ನನಗೆ ಗೊತ್ತು. ಆದರೆ, ನಾನು ನಿನ್ನನ್ನು ಎಷ್ಟು ಇಷ್ಟಪಡುತ್ತೇನೆ ಅಂತ ನಿನಗೆ ಗೊತ್ತಿಲ್ಲ ಕಣೋ. ಮಾತುಗಳಲ್ಲಿ ವರ್ಣಿಸಲಾಗದಷ್ಟು ನಿನ್ನನ್ನು ಪ್ರೀತಿಸುತ್ತಿದ್ದೇನೆ.
ನೆನಪಿದೆಯಾ ನಿನಗೆ ಬಸ್ ನಿಲ್ದಾಣದ ಮೂಲೆಯೊಂದರಲ್ಲಿ ಕುಳಿತುಕೊಂಡಾಗ ಯಾರೋ ಒಬ್ಬಳು ಅಜ್ಜಿ ತನ್ನ ಮಕ್ಕಳು ತನಗೆ ಊಟ ಹಾಕುತ್ತಿಲ್ಲವೆಂದು ಅವಳ ಕತೆಯನ್ನು ಕೇಳಿ ಅವಳ ಕಣ್ಣೀರಿನ ಜೊತೆ ನೀನು ಕಂಬನಿ ಹಾಕಿದ್ದು. ಅವಳಿಗೆ ನಿನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡಿದ್ದು, ನಿನ್ನ ಕೈಯಾರೆ ಅವಳಿಗೆ ತುತ್ತು ನೀಡಿ ಅವಳನ್ನು ಸಮಾಧಾನ ಮಾಡಿ ಹೋದದ್ದು. ಎಲ್ಲವನ್ನೂ ನಾನು ನೋಡಿದ್ದೇನೆ ಯಾರದೋ ಅಪರಿಚಿತರ ಕಣ್ಣೀರು ಒರೆಸೋ ನಿನ್ನ ಮನದ ಮಿಡಿತಕ್ಕೆ ನಾನು ಸೋತೆನು. ಅಂದಿನಿಂದ ಇಂದಿನವರೆಗೂ ನಿನಗಿಂತ ಹೆಚ್ಚು ನಾನು ನಿನ್ನ ಪ್ರೀತಿಸುತ್ತಿದ್ದೇನೆ.
ನಿನ್ನ ಬಗ್ಗೆ ನನಗೆ ಎಲ್ಲ ಗೊತ್ತು ಕಣೊ. ನೀನು ಅತಿ ಹೆಚ್ಚು ಪ್ರೀತಿಸುವುದು ನಿನ್ನ ತಾಯಿಯನ್ನು. ಆದರೆ, ನನ್ನನ್ನು ಯಾಕೆ ಪ್ರೀತಿಸುತ್ತಿರುವೆ ಎಂದು ತಿಳಿದಿಲ್ಲ. ನಿನ್ನ ಮೌನದ ಮುದ್ದಿನ ಮನಸ್ಸು ಯಾವಾಗ ನನ್ನ ಮನಸ್ಸಿಗೆ ಹಿಡಿದಿರುವ ಗೊಂದಲ ಬಿಡಿಸುತ್ತೆ. ನಿನ್ನಂತ ಹುಡುಗನ ಪ್ರೀತಿ ನನಗೆ ಸಿಕ್ಕಿರುವುದು ಏಳೇಳು ಜನ್ಮದ ಪುಣ್ಯ ಕಣೋ. ಆದರೆ, ನೀನೇ ಬಂದು ಮನದ ಮಾತುಗಳನ್ನು ಹೇಳಬೇಕೆಂಬ ಹಠವಾದಿ ನಾನು ಆದಷ್ಟು ಬೇಗ ನಿನ್ನ ಮನದ ಮಾತು ತಿಳಿಸಿಬಿಡು.
ದೇವರೇ ನನ್ನ ಮುದ್ದಿನ ಹುಡುಗನಿಗೆ ಪ್ರೀತಿಯ ಸಮ್ಮತಿ ತಿಳಿಸುವ ಧೈರ್ಯ ಅವನಿಗೆ ನೀಡು. ಅವನಿಲ್ಲದೆ ತಾಯಿ ಕಳೆದುಕೊಂಡ ಮಗುವಿನಂತೆ ಯಾಗಿದೆ ನನ್ನ ಪಾಡು.
– ಮೇಘಾ ದೊಡಮನಿ
