ನನ್ನ ತೋಳಿನಾಸರೆ ನಿನಗೆ ಸಾಂತ್ವನ ನೀಡಲು ಕಾಯುತಿದೆ

ಪ್ರಿಯ ಸಖ,

      ನೀನಲ್ಲಿ ನಾನಿಲ್ಲಿ ಆದರೆ ನಮ್ಮಿಬ್ಬರ ಇರುಳಿಗೆ ಇರುವುದು ಚಂದ್ರ ಒಬ್ಬನೆ! ಇಂದೆಕೊ ಆ ಚಂದ್ರ ಮಂಕಾಗಿದ್ದಾನೆ ಹಾಗಾಗಿ ನೀನು ಅಲ್ಲಿ ಹೇಗಿರುವೆ ಎಂಬ ಆತಂಕ ನನಗೆ. ನನ್ನ ಖುಷಿಗಾಗಿ iam fine ಎಂದು ಹೇಳುತ್ತಿರುವೆ ಅಂತ ಗೊತ್ತು. ಮುದ್ದು, ನನ್ನ ದೇಹ ಇಲ್ಲಿರಬಹುದು ಆದರೆ ನನ್ನ ಹೃದಯವಿದು ನಿನ್ನಲ್ಲಿ ಜೋಪಾನವಾಗಿರಲಿ ಎಂದು ಹೇಳಿ ಇಟ್ಟು ಬಂದಿದ್ದನ್ನು ಮರೆತು ಹೋಯಿತೇ?

       ಆ ಹೃದಯದ ಬಡಿತದ ನಾದ ನನಗೆ ಅರ್ಥವಾಗಿದೆ ಯಾಕೊ ಎನೂ ಸರಿಯಿಲ್ಲವೆಂದು. ನಾನು ನಿನ್ನ ಜೀವದ ಗೆಳತಿ, ಆತ್ಮ ಸಖಿ ನನ್ನಲ್ಲಿ ಏಕೆ ಈ ಮುಚ್ಚುಮರೆ? ಮೊನ್ನೆ ನೀನು ಕೊಡಿಸಿದ ಚಂಪಾಕಲಿಯನ್ನು ಇಬ್ಬರೂ ಹಂಚಿಕೊಂಡು ತಿನ್ನಲಿಲ್ಲವೇ! ಸಿಹಿಯಲ್ಲಿ ಮಾತ್ರ ನನಗೆ ಪಾಲೆ? ದುಃಖದಲ್ಲಿ ಇಲ್ಲವೇನು? ಹೇಳಿ ಬಿಡು ನನ್ನ ದೊರೆ ನಿನ್ನ ಬೇಸರವೆನೆಂದು. ನನ್ನಿಂದ ತಡೆಯಲಾಗುತ್ತಿಲ್ಲ. ನಿನ್ನ ಸಣ್ಣ ನೋವು ನನ್ನಲ್ಲಿ ವೃಣವಾಗಿ ಜೀವ ಹಿಂಡುತ್ತಿದೆ.

       ಸರ್ವ ಋತುಗಳಲ್ಲೂ ನಾನು ಸದಾ ನಿನ್ನೊಂದಿಗಿರುವೆ, ನಿನ್ನ ನೋವಿನಲ್ಲೂ ನಲಿವಿನಲ್ಲೂ. ಹೇಳಿ ಹಗುರಾಗಿ ಬಿಡು ನಿನ್ನ ಬೇಸರವೇನೆಂದು. ನನ್ನ ತೋಳಿನಾಸರೆ ನಿನಗೆ ಸಾಂತ್ವನ ನೀಡಲು ಕಾಯುತಿದೆ…..ತಡ ಮಾಡಬೇಡ. ಇತಿ ನಿನ್ನ……

ಕಲ್ಪನಾ ಸಾಗರ, ಹುಬ್ಬಳ್ಳಿ

Exit mobile version