ಕುರಿಗಾಹಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ

ಶಿರಹಟ್ಟಿ: ತಾಲೂಕು ಹಾಗೂ ರಾಜ್ಯದಲ್ಲಿ ಕುರಿಗಾಹಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ತಾಲೂಕು ಕುರುಬರ ಸಂಘದ ವತಿಯಿಂದ ಗುರುವಾರ ಸ್ಥಳೀಯ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ದೇವಪ್ಪ ಬಟ್ಟೂರ ಹಾಗೂ ಸಂತೋಷ ಕುರಿ ಮಾತನಾಡಿ, ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ, ಟೆಂಟ್, ಟಾರ್ಚ್ ಹಾಗೂ ಕುರಿಗಾರರ ಕಿಟ್ ಕೆವಲ ಸೊಸೈಟಿಗಳಿಗೆ ಕೊಡುವದಲ್ಲದೇ ಮುಕ್ತವಾಗಿ ಎಲ್ಲ ಕುರಿಗಾಹಿಗಳಿಗೆ ಕೊಡಬೇಕೆಂದು ಹೇಳಿದರು.

ಹಿಂದಿನ ಸರ್ಕಾರದಲ್ಲಿ ಅಕಾಲಿಕ ಸತ್ತ ಕುರಿಗಳಿಗೆ 5000 ರೂ ಪರಿಹಾರ ಧನ ಸಹಾಯ ಕೊಡುತ್ತಿತ್ತು. ಸದ್ಯ ಪ್ರಸ್ತುತ ಸರ್ಕಾರ ಅದನ್ನು ಸ್ಥಗಿತಗೊಳಿಸಿದ್ದು, ಕೂಡಲೇ ಈ ಯೋಜನೆಯನ್ನು ಪುನಃ ಪ್ರಾರಂಭಿಸಬೇಕು.ಅರಣ್ಯ ಇಲಾಖೆಯವರಿಂದ ಪದೇ ಪದೇ ಕುರಿಗಾಹಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕುರಿಗಾಹಿಗಳಿಗೆ ರಕ್ಷಣೆ ನೀಡಿ ಗುಡ್ಡಗಾಡು ಹಾಗೂ ಹುಲ್ಲುಗಾವಲು ಪ್ರದೇಶಗಳನ್ನು ಕುರಿಗಳನ್ನು ಮೇಯಿಸಲಿಕ್ಕೆ ಅವಕಾಶ ಕಲ್ಪಿಸಬೇಕು ಎಂದರು.

ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು ಕೂಡಲೇ ವೈದ್ಯರ ನೇಮಕ ಮಾಡಿ ಕುರಿಗಳಿಗೆ ಸಮಯಕ್ಕೆ ಸರಿಯಾಗಿ ಔಷಧಿ ನೀಡಬೇಕು. ಕೂಡಲೇ ನಮ್ಮ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು. ವಿಳಂಬ ನೀತಿ ತೋರಿದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಂಜುನಾಥ ಘಂಟಿ, ಆನಂದ ಮಾಳೇಕೊಪ್ಪ, ಎಫ್ ಆರ್. ಕಲಾದಗಿ, ನಿಂಗಪ್ಪ ಕಮತ, ಯಲ್ಲಪ್ಪ ಹಾಲಪ್ಪನವರ, ಜಗದೀಶ ಇಟ್ಟೆಕಾರ, ನಿಂಗಪ್ಪ ಹಾದಿಮನಿ, ಎಮ್ ಆಯ್. ಬಳೂಟಗಿ, ಗೋಪಾಲಪ್ಪ ಹಾರೋಗೇರಿ, ಹಾಲನಗೌಡ ಪಾಟೀಲ, ಯಲ್ಲವ್ವ ಕೌಜಗೇರಿ, ಭರಮಪ್ಪ ಮುರಾರಿ ಸೇರಿದಂತೆ ಅನೇಕ ಸಮಾಜ ಬಾಂಧವರು ಹಾಜರಿದ್ದರು.

Exit mobile version