ಆದುನಿಕತೆಯಲ್ಲಿ ಜಾನಪದ ಸಾಹಿತ್ಯ ಮರೆಯಾಗದಿರಲಿ: ದೊಡ್ಡಮನಿ

ಶಿರಹಟ್ಟಿ: ಜಾನಪದ ಸಾಹಿತ್ಯ ಇಂದಿನ ಆಧುನಿಕ ಸ್ಪರ್ಶದಿಂದ ಕಣ್ಮರೆಯಾಗುತ್ತಿದ್ದು,  ವೈಶಿಷ್ಟಪೂರ್ಣವಾದ ಈ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಪಟ್ಟಣದ ಬೀರೇಶ್ವರ ಕಾರ್ತಿಕೋತ್ಸವದ ಅಂಗವಾಗಿ ನಡೆದ 15ನೇ ವರ್ಷದ ಡೊಳ್ಳಿನ ಪದಗಳ ಜಾನಪದ ಝಗ-ಮಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದರು ತಮ್ಮ ನಿತ್ಯ ಕಾಯಕದಲ್ಲಿ ದಣಿವನ್ನು ಕಳೆಯಲು ನುಡಿಯುವ ಮಾತುಗಳು ಹಾಡಾಗಿ ಹೊರ ಹೊಮ್ಮುತ್ತಿದ್ದವು, ಅವರ ಉಸಿರು ಜಾನಪದವಾಗಿತ್ತು, ಅದಕ್ಕಾಗಿ ಅವರು ಕೈಯಲ್ಲಿ ಸತ್ಯ ಶುದ್ಧ ಕಾಯಕ, ಮನದಲ್ಲಿ ದೇವರನ್ನು ನೆನೆದು ಜೀವನ ಸಾಗಿಸುತ್ತಿದ್ದರು, ಅಲ್ಲದೇ ನಮ್ಮ ರೈತರು ಹಂತಿಪದ, ಗೀಗೀ ಪದ, ಬೀಸುವ, ಕುಟ್ಟುವ, ಸೋಬಾನ ಪದ ಸೇರಿದಂತೆ ಲಾವಣಿ ಪದಗಳನ್ನು ಕಟ್ಟಿ ಹಾಡುವುದರ ಮೂಲಕ ಜಾನಪದ ಕಾವ್ಯಲೋಕವನ್ನೇ ಶ್ರೀಮಂತಗೋಳಿಸಿದ ಕೀರ್ತಿ ನಮ್ಮ ಪೂರ್ವಜರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ವೇಳೆ ಪ್ರತಿ ವರ್ಷ ನೀಡುವ ಪರಿಶ್ರಮ ನಕ್ಷತ್ರ ಪ್ರಶಸ್ತಿಯನ್ನು ಈ ವರ್ಷ ಕನ್ನಡ ಕೋಗಿಲೆ ಸೀಸನ್ 2 ವಿಜೇತ ಖಾಸೀಂ ಅಲಿ ಅವರಿಗೆ ಮತ್ತು ಸಿವಿಲ್ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಸಹನಾ ಪಾಟೀಲ ಅವರಿಗೆ ನೀಡಿ ಗೌರವಿಸಲಾಯಿತು.

ಪಪಂ ಅಧ್ಯಕ್ಷ ಪರಮೇಶ ಪರಬ, ಉಪಾಧ್ಯಕ್ಷ ಇಸಾಕ ಆದ್ರಳ್ಳಿ, ಸದಸ್ಯ ಮಂಜುನಾಥ ಘಂಟಿ, ಎಚ್.ಡಿ. ಮಾಗಡಿ, ಅಶರತಲಿ ಢಾಲಾಯತ, ದೇವಪ್ಪ ಬಟ್ಟೂರ, ಸಂತೋಷ ಕುರಿ, ಭಾಗ್ಯಶ್ರೀ ಬಾಬಣ್ಣ, ನಿಂಗಪ್ಪ ಕರಿಗಾರ, ಎನ್.ವಿ. ಪಡೆಗೇರ, ಗೂಳಪ್ಪ ಕರಿಗಾರ, ಸೋಮನಗೌಡ ಮರಿಗೌಡ್ರ, ಮುದಕಪ್ಪ ಪೂಜಾರ ಸೇರಿದಂತೆ ಇತರರು ಇದ್ದರು.

Exit mobile version