ಚೆನ್ನೈ : ಮೊಬೈಲ್ ಬಳಸುವ ಬಗ್ಗೆ ಬುದ್ಧಿವಾದ ಹೇಳಿದ್ದಕ್ಕೆ 16 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ. ಈ ಬಾಲಕ ಯಾವಾಗಲೂ ಮೊಬೈಲ್ ನಲ್ಲಿಯೇ ಮುಳುಗಿರುತ್ತಿದ್ದ. ಹೀಗಾಗಿ ಪಾಲಕರು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಲಾಕ್ ಡೌನ್ ಸಂದರ್ಭದಲ್ಲಿ ಈ ಬಾಲಕ ಗೇಮ್ ಆಡುವುದರೊಂದಿಗೆ ಸಮಯ ಕಳೆಯುತ್ತಿದ್ದ. ಹೀಗಾಗಿ ಆತ ಗೇಮ್ ವ್ಯಸನಿಯಾಗಿದ್ದ. ಪೋಷಕರು ಎಷ್ಟೇ ಬುದ್ದಿಯ ಮಾತುಗಳನ್ನು ಹೇಳಿದರೂ ಮೊಬೈಲ್ ನಲ್ಲಿಯೇ ಕಾಲ ಕಳೆಯುತ್ತಿದ್ದ. ಹೀಗಾಗಿ ಪಾಲಕರು ಮೊಬೈಲ್ ಕಸಿದುಕೊಂಡಿದ್ದರು. ಇದರಿಂದಾಗಿ ಬಾಲಕ ಕೋಪಗೊಂಡಿದ್ದ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮರಳಿ ಮನೆಗೆ ಬಂದಿದ್ದ ಪಾಲಕರು, ಬಾಲಕನ ಮೃತದೇಹ ಕಂಡು ಆಘಾತಗೊಂಡಿದ್ದಾರೆ. ಆ ನಂತರ ಪುದೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
