ಗಜೇಂದ್ರಗಡ: ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಸಿಪಿಐಎಂ ಪಕ್ಷ ಬೆಂಬಲಿಸಲಿದೆ ಎಂದು ಸಿಪಿಐಎಂ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ ತಿಳಿಸಿದರು.
ಪಟ್ಟಣದ ಸಿಪಿಐಎಂ ಕಚೇರಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಜನರ ನೆರವಿಗೆ ಧಾವಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇನ್ನೊಂದೆಡೆ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ಭಾವನೆ ತಾಳುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಲೇ ಇದೆ.
ಕಾಂಗ್ರೆಸ್ ಪಕ್ಷವೂ ಸಹ ಪ್ರಬಲ ವಿರೋಧ ಪಕ್ಷವಾಗಿ ಆಡಳಿತ ಪಕ್ಷಕ್ಕೆ ಪ್ರತಿರೋಧ ತೋರುವಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಬಿಜೆಪಿ ಸರ್ಕಾರದ ಧೋರಣೆಗಳನ್ನು ಪ್ರಬಲವಾಗಿ ಖಂಡಿಸುವಲ್ಲಿ ಹಿಂದೆ ಬಿದ್ದಿದೆ. ಈ ಹಿನ್ನಲೆಯಲ್ಲಿ ರಾಜ್ಯದ ನಾಲ್ಕ ಪ್ರದೇಶದಲ್ಲಿ ನಡೆಯುತ್ತಿರುವ ಪದವೀಧರರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸುವ ಉದ್ದೇಶದಿಂದ ಸಿಪಿಐಎಂ ಪಕ್ಷ ಪಶ್ಚಿವ ಪದವೀಧರ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಗುರಿಕಾರ ಅವರನ್ನು ಬೆಂಬಲಿಸಿದೆ. ಪದವೀಧರ ಮತದಾರರು ಕ್ಷೇತ್ರದಲ್ಲಿ ಬದಲಾವಣೆ ತರುವ ಮೂಲಕ ಗುರಿಕಾರ ಅವರಿಗೆ ಮತ ನೀಡಿ, ನಿಸ್ವಾರ್ಥ ಸೇವೆಗೆ ಅವಕಾಶ ಕಲ್ಪಿಸಬೇಕಿದೆ ಎಂದರು.
ಸಿಪಿಐಎA ಮುಖಂಡರಾದ ಎಂ.ಎಸ್. ಹಡಪದ, ಮಾರುತಿ ಚಿಟಗಿ, ಬಾಲು ರಾಠೋಡ, ಬಸವರಾಜ ಹೊಸಮನಿ, ಪೀರು ರಾಠೋಡ, ಮೈಬು ಹವಾಲ್ದಾರ, ಗಣೇಶ ರಾಠೋಡ ಇದ್ದರು.
