ಮಣಿಪುರ ಬಿಜೆಪಿ ಸರ್ಕಾರಕ್ಕೆ ಸಂಕಷ್ಟ..!

ಇಂಫಾಲ: ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿಯ ಮೂವರು ಶಾಸಕರು ಮತ್ತು ಎನ್.ಪಿ.ಪಿ.ಯ ಒಬ್ಬ ಶಾಸಕ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯ ಮೈತ್ರಿ ಪಕ್ಷ ಎನ್.ಪಿ.ಪಿ. ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದೆ.

ಇವರ ಜೊತೆ ಕೈಜೋಡಿಸಿರುವ ಟಿಎಂಸಿ ಶಾಸಕ ಮತ್ತು ಪಕ್ಷೇತರ ಶಾಸಕ ಜಿರಿಬಮ್ ಕೂಡ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಬಿಜೆಪಿಯಿಂದ ಗೆದ್ದ ಮೂರು ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಈ ಮೂಲಕ ಎನ್.ಬಿರೆನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಸದ್ಯಕ್ಕೆ 8 ವಿಧಾನಸಭೆ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ.

2017ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಶಾಲಿಯಾಗಿದ್ದರು. ಸರ್ಕಾರ ರಚಿಸಲು 31 ಶಾಸಕರ ಬೆಂಬಲ ಅಗತ್ಯವಿತ್ತು. ಆದರೆ, 21 ಕ್ಷೇತ್ರಗಳಲ್ಲಿ ಜಯಿಸಿದ್ದ ಬಿಜೆಪಿಗೆ ಅಂದಿನ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಸರ್ಕಾರ ರಚಿಸಲು ಅವಕಾಶ ನೀಡಿದ್ದರು.

ಅನಂತರ ನಡೆದ ರಾಜಕೀಯ ಸ್ಥಿತ್ಯಂತರಗಳಲ್ಲಿ ಬಿಜೆಪಿ ಸರ್ಕಾರ ರಚಿಸಿ ಬಹುತಮತ ಗಳಿಸುವಲ್ಲಿ ಸಫಲವಾಗಿತ್ತು. ಬಿಜೆಪಿ 21, ಎನ್ ಪಿ ಎಫ್ 4, ಎನ್ ಪಿ ಪಿ 4, ಟಿಎಂಸಿ 1, ಎಲ್ ಜೆ ಪಿ 1, ಪಕ್ಷೇತರ 1 ಶಾಸಕರ ಬೆಂಬಲ ಗಳಿಸಿ, ಬಿಜೆಪಿ ಸರ್ಕಾರ ರಚಿಸಿತ್ತು. ಕಾಂಗ್ರೆಸ್ ನ 7 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಈ ಮೂಲಕ ಬಿಜೆಪಿ ತನ್ನ ಬಲವನ್ನು ಹೆಚ್ಚಿಸಿಕೊಂಡಿತ್ತು. ಆದರೆ, ಇದೀಗ ಬಿಜೆಪಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.

Exit mobile version