ಕಲಬುರಗಿ : ಮಳೆ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯ ಜನರ ಬದುಕು ಮೂರಾಬಟ್ಟೆಯಾಗಿದೆ. ಈ ನಿಟ್ಟಿನಲ್ಲಿ ರಕ್ಷಣಾ ಕಾರ್ಯಕ್ಕೆ ಸೇನೆ ನಿಯೋಜನೆ ಮಾಡಲಾಗಿದೆ.
ಸಿಕಂದ್ರಾಬಾದ್ ನಿಂದ 98 ಯೋಧರ ಪಡೆ ಬಂದಿದ್ದು, ಮೇಜರ್ ಮಾರ್ಟಿನ್ ಅರವಿಂದ್ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದೆ. ಯೋಧರನ್ನು ಮೂರು ತಂಡಗಳಾಗಿ ವಿಭಾಗಿಸಿ ಅಫಜಲಪುರ್, ಜೇವರ್ಗಿ ಹಾಗೂ ಶಹಾಬಾದ್ ತಾಲೂಕಿನಲ್ಲಿ ಜನರ ರಕ್ಷಣೆಗೆ ನಿಯೋಜಿಸಲಾಗಿದೆ.
ಭೀಮಾನ ನದಿಯ ರೌದ್ರಾವತಾರ ಇನ್ನೂ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಉಡಚಣ ಗ್ರಾಮ ನೀರಿನಲ್ಲಿ ಮುಳುಗಡೆಯಾಗಿತ್ತು. ಹೀಗಾಗಿ ಗ್ರಾಮದ 225 ಜನರನ್ನು ರಕ್ಷಣೆ ಮಾಡಲಾಗಿದೆ.
ಭೀಮಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭೀಮಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಭೀಮಾ ನದಿಗೆ ಬಿಡಲಾಗಿದೆ. ಇದರಿಂದಾಗಿ ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರವಾಹ ಉಂಟಾಗಿ ಜನ – ಜಾನುವಾರುಗಳ ಬದುಕು ಬೀದಿಗೆ ಬರುವಂತಾಗಿದೆ.
