ವಾಯುಭಾರ ಕುಸಿತ – ಒಂದೇ ಜಿಲ್ಲೆಯ ಬರೋಬ್ಬರಿ 148 ಗ್ರಾಮಗಳಲ್ಲಿ ಪ್ರವಾಹ ಭೀತಿ!

ಕಲಬುರಗಿ : ವಾಯುಭಾರ ಕುಸಿತದಿಂದಾಗಿ ಉತ್ತರ ಕರ್ನಾಟಕದಲ್ಲಿ ಮಳೆರಾಯನ ಅಟ್ಟಹಾಸ ಮುಂದುವರೆದಿದೆ. ಇದರಿಂದಾಗಿ ಜನ ಬೀದಿಗೆ ಬಂದು ನಿಂತಿದ್ದಾರೆ.

ಇದರ ಮಧ್ಯೆಯೇ ಮಹಾರಾಷ್ಟ್ರ ರಾಜ್ಯವೂ ಜಲಂಗಡಾಂತರಕ್ಕೆ ಸಾಕ್ಷಿಯಾಗುತ್ತಿದೆ. ಇದರಿಂದಾಗಿ ಕಲಬುರಗಿ ಜಿಲ್ಲೆಯ 148 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ಮುಳುಗಡೆಯ ಸಂಕಷ್ಟದಲ್ಲಿವೆ.

20 ವರ್ಷಗಳಲ್ಲಿಯೇ  ಎಂದೂ ಕಂಡರಿಯದಂತಹ ಮಳೆ ಸುರಿಯುತ್ತಿದೆ. ವಾಯುಭಾರ ಕುಸಿತದಿಂದಾಗಿ ಮಹಾರಾಷ್ಟ್ರದಲ್ಲಿ ಕೂಡ ಹೆಚ್ಚಿನ ಮಳೆಯಾಗುತ್ತಿದ್ದು, ರಾಜ್ಯದ ಗಡಿ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತಿದೆ.

ಕಲಬುರಗಿ ಜಿಲ್ಲೆಯ ಜನರ ಬದುಕನ್ನು ಇದು ಕಿತ್ತುಕೊಂಡಿದೆ. ಮಹಾರಾಷ್ಟ್ರದ ಉಜನಿ, ವೀರ್ ಡ್ಯಾಮ್ ಗಳಿಂದ ಕ್ಷಣ ಕ್ಷಣಕ್ಕೂ ನೀರಿನ ಹರಿವು ವಿಪರೀತವಾಗಿ ಹೆಚ್ಚಾಗುತ್ತಿದೆ. ಸದ್ಯ ಭೀಮಾ ನದಿ ಭೋರ್ಗರೆಯುತ್ತಿದ್ದು, ನದಿ ತೀರದ 148 ಗ್ರಾಮಗಳಿಗೆ ಮುಳುಗಡೆಯ ಸಂಕಷ್ಟ ಬಂದು ನಿಂತಿದೆ. ಅಲ್ಲದೇ, ಈಗಾಗಲೇ ಹಲವು ಗ್ರಾಮಗಳು ಮುಳುಗಡೆಯಾಗಿವೆ.

ಸರ್ಕಾರದ ಅಂಕಿ – ಸಂಖ್ಯೆಯಂತೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ 4,819 ಮನೆಗಳಿಗೆ ನೀರು ನುಗ್ಗಿದೆ. 1058 ಮನೆಗಳು ಬಹುತೇಕವಾಗಿ ಹಾನಿಯಾಗಿವೆ. 518 ಜಾನುವಾರುಗಳ ಜೀವ ಹಾನಿಯಾಗಿದೆ. ಸದ್ಯ ಭೀಮಾ ನದಿಯ ಆರ್ಭಟ ಇನ್ನೂ ಹೆಚ್ಚಾಗುತ್ತಿರುವುದರಿಂದ ಯಾವೆಲ್ಲ ಅನಾಹುತಗಳು ಸಂಭವಿಸಲಿವೆ ಎಂಬ ಚಿಂತೆ ಜಿಲ್ಲೆಯ ಜನರನ್ನು ಕಾಡುತ್ತಿದೆ. 

ಜಿಲ್ಲೆಯ ಜೇವರ್ಗಿ, ಚಿತ್ತಾಪುರ, ಅಫ್ಜಲ್ಪುದರ ಹಾಗೂ ಸೇಡಂ ತಾಲೂಕಿನ ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ರೈತ ಸ್ನೇಹಿಯಾಗಿದ್ದ 5 ಎತ್ತುಗಳು ದಿಕ್ಸಂಗಾ ಗ್ರಾಮದಲ್ಲಿ ತೇಲಿ ಹೋಗಿವೆ. ಚಿಂಚೋಳಿ ತಾಲೂಕಿನಲ್ಲಿ ಇಡೀ ರಾತ್ರಿ ಮಳೆರಾಯ ಬೆಂಬಿಡದೆ ಭೂಮಿಗೆ ಬಂದಿದ್ದಾನೆ. ನಾಗಾಇದಾಲಾಯಿ ಗ್ರಾಮದ ಕೆರೆ ಒಡೆದು ಗ್ರಾಮಕ್ಕೆ ನೀರು ನುಗ್ಗಿದೆ. ದವಸ – ಧಾನ್ಯ ಕಳೆದುಕೊಂಡಿರುವ ರೈತರು ಕಂಗಾಲಾಗಿ ಬೀದಿಗೆ ಬಂದು ನಿಂತಿದ್ದಾರೆ. 

Exit mobile version