ಸಂಗೀತಾಳಿಗೆ ಬೇಕಿದೆ ಸಹಾಯ: ಪಿಯಸಿಯಲ್ಲಿ ಶೇ.90 ಅಂಕ; ಬೆಂಬಿಡದ ಬಡತನದಿಂದ ಶಿಕ್ಷಣ ನಿಲ್ಲಿಸಲು ಮುಂದಾದ ವಿದ್ಯಾರ್ಥಿನಿ..!

laxmeshwar sangeeta Student

ಸಂಗೀತಾಳಿಗೆ ಬೇಕಿದೆ ಸಹಾಯ: ಪಿಯಸಿಯಲ್ಲಿ ಶೇ.90 ಅಂಕ ಬೆಂಬಿಡದ ಬಡತನದಿಂದ ಶಿಕ್ಷಣ ನಿಲ್ಲಿಸಲು ಮುಂದಾದ ವಿದ್ಯಾರ್ಥಿನಿ..!

ಲಕ್ಷ್ಮೇಶ್ವರ: ಪಿಯುಸಿ ಪರೀಕ್ಷೆಯಲ್ಲಿ ಶೇ.90 ಅಂಕ ಪಡೆದ ಪ್ರತಿಭಾವಂತೆಯ ಕಥೆ ಇದು. ಪಿಯುಸಿಯಲ್ಲಿನ ಹೆಚ್ಚು ಅಂಕದ ಉತ್ಸಾಹದಲ್ಲಿದ್ದ ವಿದ್ಯಾರ್ಥಿನಿಗೆ ಕುಟುಂಬದ ಆರ್ಥಿಕ ಸ್ಥಿತಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ಹಂತಕ್ಕೆ ತಂದಿದೆ. ಹೀಗಾಗಿ ಬದುಕಿನಲ್ಲಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹತ್ತು ಹಲವು ಕನಸು ಕಟ್ಟಿಕೊಂಡಿದ್ದ ವಿದ್ಯಾರ್ಥಿನಿ ಸಂಗೀತಾಳಿಗೆ ಓದು ಮುಂದುವರೆಸುವುದು ಕಷ್ಟವಾಗಿದೆ.

ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬ ನಾನ್ನುಡಿಯಂತೆ ಸತತ ಪ್ರಯತ್ನದಿಂದ ಬಡತನದಲ್ಲೂ ಪಿ.ಯು.ಸಿ.ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೈದಿರುವ ಗ್ರಾಮೀಣ ಪ್ರತಿಭೆ ಸಂಗೀತಾ ಲಮಾಣಿ ಬಡತನದಿಂದ ಶಿಕ್ಷಣ ಮುಂದವರೆಸಲು ಸಾಧ್ಯವಾಗದ ಕಾರಣ, ಗುಳೆ ಹೋಗುವ ಯೋಚನೆಯಲ್ಲಿದ್ದಾಳೆ.

ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿಯ ಸಂಗೀತಾ ಲಮಾಣಿ, ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90.66 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಆದರೆ ಇದೀಗ ಕುಟುಂಬಕ್ಕಂಟಿದ ಬಡತನದಿಂದ ಶಿಕ್ಷಣ ಮುಂದವರೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾಯಿಯ ಜೊತೆ ಗುಳೆ ಹೋಗಲು ತೀರ್ಮಾನಿಸಿದ್ದಾಳೆ.

ಹಲವು ವರ್ಷಗಳ ಹಿಂದೆಯೇ ತಂದೆ ತೀರಿದ್ದು ತಾಯಿ ಚಂದ್ರವ್ವಳೇ ಸಂಸಾರದ ನೊಗ ಹೊತ್ತು ಮಗಳನ್ನು ಈವರೆಗೆ ಓದಿಸಿದ್ದಾಳೆ. ಸಂಗೀತಾಳಿಗೆ ಒಬ್ಬ ತಮ್ಮ ಕೂಡ ಇದ್ದಾನೆ. ಒಟ್ಟು ಮೂರು ಜನರ ಪುಟ್ಟ ಕುಟುಂಬ ಇದು. ಆದರೆ ಬಡತನ ಎಂಬ ಸೈತಾನನ ವಕ್ರದೃಷ್ಟಿಯಿಂದ ಈ ಕುಟುಂಬಕ್ಕೆ ಮುಕ್ತ ಕಾಣುತ್ತಿಲ್ಲ. ಗಾಗಲೇ ಹೋಗೋ ಕಷ್ಟಪಟ್ಟು ತಾಯಿ ಚಂದ್ರವ್ವ, ಸಂಗೀತಾಳಿಗೆ ಓದಿಸಿದ್ದಾಳೆ. ತಾಯಿಯ ಆ ಕಷ್ಟದ ಪ್ರತಿಫಲ ಎಂಬಂತೆ ಸಂಗೀತಾ ಹೆಚ್ಚಿನ ಅಂಕಗಳಿಸಿದ್ದು, ಹೆಮ್ಮೆಯೇ ಸರಿ. ಆದರೆ ಈಗಾಗಲೇ ಸಂಗೀತಾಳ ತಾಯಿ ಚಂದ್ರವ್ವಳಿಗೂ ದುಡಿಯೋದು ಕಷ್ಟ.

ಕಲಿಬೇಕು ಅನ್ನೋ ಆಸೆ ಐತಿ ಆದ್ರ….

ಶಾಲೆಗೆ ಬಿಡುವು ಇದ್ದಾಗ ನಮ್ಮ ತಾಯಿಯೊಂದಿಗೆ ಕೂಲಿ ಕೆಲಸ ಮಾಡಿ ವಿದ್ಯಾಭ್ಯಾಸ ಮಾಡಿದ್ದರ ಪರಿಣಾಮ ಉತ್ತಮ ಅಂಕಗಳಿಸಿದ ತೃಪ್ತಿ ನನಗಿದೆ. ಆದರೆ ಮುಂದಿನ ಓದಿಗಾಗಿ ತುಂಬಾ ಖರ್ಚು ಬರುತ್ತದೆ. ಹೀಗಾಗಿ ತಾಯಿ ಒಬ್ಬಳು ಕೂಲಿ ಕೆಲಸ ಮಾಡಿದರೆ ಮನೆಗೆ ಸಾಕಾಗುವುದಿಲ್ಲ. ಮುಂದೆ ಓದಿ ಉತ್ತಮ ಅಧಿಕಾರಿ ಆಗಬೇಕೆಂಬ ಆಸೆ ಇದೆ. ಆದರೆ ಕುಟುಂಬದ ಅನಿವಾರ್ಯತೆಗಾಗಿ ಶಿಕ್ಷಣ ಮುಂದುವರೆಸುವುದು ಸಾಧ್ಯವಾಗುತ್ತಿಲ್ಲ.

ಸಂಗೀತಾ ಲಮಾಣಿ, ವಿದ್ಯಾರ್ಥಿನಿ

ಒಂದೆಡೆ ಮಗಳನ್ನು ಓದಿಸಬೇಕು ಎನ್ನುವ ಕನಸು. ಆದರೆ ಏನು ಮಾಡುವುದು ಮಗಳನ್ನು ಓದಿಸಬೇಕು ಅಂದರೆ ಚಂದ್ರವ್ವ ಇನ್ನು ದುಡಿಯಲೇಬೇಕು. ಆದರೆ ಈಗಾಗಲೇ ದುಡಿತದಲ್ಲಿ ಹಣ್ಣಾಗುತ್ತಿರುವ ತಾಯಿ ಸ್ಥಿತಿ ಕಂಡು ಸಂಗೀತಾ ತಾನೇ ತನ್ನ ಶಿಕ್ಷಣ ಮೊಟಕುಗೊಳಿಸಿ ದುಡಿದು ತಾಯಿಯನ್ನು ಸಾಕಿದರಾಯಿತು ಎಂಬ ತೀರ್ಮಾನಕ್ಕೆ ಬಂದಿದ್ದಾಳೆ.

ಇದು ನಮ್ ಪರಿಸ್ಥಿತಿ..

ಎಲ್ಲಾರಂಗ ನನಗೂ ನನ್ ಮಕ್ಕಳನ್ ಓದಿಸಬೇಕು ಅಂತ ಆಸೆ ಐತ್ರಿ. ಆದ್ರ ನ್ ಮಾಡಬೇಕು. ಬಡತನ ನಮಗ ಬೆನ್ನಿಗೆ ಬಿದ್ದೈತಿ. ಇದ್ ಒಬ್ಬ ಗಂಡ ಮಗ ಇನ್ನ ಸಣ್ಣಾಂವ ಅದಾನ. ಈಗ ನಾನಾ ದುಡದ್ ಮಕ್ಕಳನ್ ಇಲ್ಲಿವರೆಗೂ ಓದ್ಸಿನಿ. ಆದ್ರೆ ಇನ್ ಮುಂದ್ ಸಂಗೀತಾಗ ದೊಡ್ ಸಾಲಿಗೆ ಹಚ್ಚಿ ಕಲಿಸೋವಷ್ಟು ಶಕ್ತಿ ನಂಗಿಲ್ರಿ. ಅದಕ್ಕ ನಮ್ಮ ಪರಿಸ್ಥಿತಿ ನೋಡಲಾರದಾ, ನನ್ನ ಮಗಳು ಶಾಲಿ ಬಿಟ್ ದುಡಿದ್ ಇದ್ ಒಬ್ಬ ತಮ್ಮನ್ನಾದ್ರು ಓದಿಸಾಣ ಅಂತ ನಿಂತಾಳ್ರಿ.

ಚಂದ್ರವ್ವ, ತಾಯಿ

ಸಂಗೀತಾ ಅನಕ್ಷರಸ್ಥ ತಂದೆಯ ಸಾವಿನಿಂದ ತುಂಬ ನೋಂದಿದ್ದರು. ಆದರೆ ತಾಯಿ ಚಂದ್ರವ್ವ, ಮಗಳಿಗೆ ಧೈರ್ಯ ತುಂಬಿದಳು. ತಾಯಿಯ ಪ್ರೇರಣೆಯೇ ಸಂಗೀತಾಳಿಗೆ ಯಾವುದೇ ಪಿಯುಸಿಯಲ್ಲಿ 554 ಅಂಕ ಪಡೆಯಲು ಸ್ಪೂರ್ತಿಯಾಯಿತು.

ಸಹಾಯ ಬೇಕು…

ಸದಾ ಅಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ ಓದುತ್ತಿದ್ದಳು. ಅವರ ತಂದೆ ನಿಧನದ ನಂತರ ಅವರ ತಾಯಿಯೂ ಕೂಲಿ ಕೆಲಸ ಮಾಡಿ ಪಿ.ಯು.ಸಿ.ಓದಿಸಿದ್ದಳು ಈಗ ಮುಂದೆ ಕಲಿಸುವುದಕ್ಕೆ ಕಷ್ಟವಾಗುತ್ತಿದೆ ಎಂದು ಅವರ ತಾಯಿ ಹೇಳುತ್ತಿದ್ದಾರೆ. ಸಂಗೀತಾ ಓದುವುದರಲ್ಲಿ ಮಾತ್ರವಲ್ಲ ಕ್ರೀಡೆಯಲ್ಲೂ ಮುಂದು. ಇಂಥವಳಿಗೆ ಯಾರಾದ್ರು ಸಹಾಯ ಮಾಡಿದ್ರ ವಿದ್ಯಾರ್ಥಿನಿ ಭವಿಷ್ಯ ಬೆಳಗಿದಂತಾಗುತ್ತದೆ.

ಚೆನ್ನಪ್ಪ ದೇವಪ್ಪ ಲಮಾಣಿ ಸ್ಥಳೀಯ

ತಾಯಿಯೊಂದಿಗೆ ಕೆಲಸ

ಕಾಲೇಜು ರಜಾ ದಿನಗಳಲ್ಲಿ ತಾಯಿ ಜೊತೆ ಕೂಲಿ ಕೆಲಸಕ್ಕೂ ಹೋಗುತ್ತಿದ್ದಳು ಸಂಗೀತಾ. ಇಷ್ಟೆಲ್ಲದರ ಮದ್ಯೆಯೂ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದು ಸಂಗೀತಾಳ ಪಾಲಿಗೆ ಸಾಧನೆಯೇ ಸರಿ. ಈ ಕಾರಣದಿಂದ ಸಂಗೀತಾ ಎನ್ನುವ ಪ್ರತಿಭೆ ಬಡತನದ ಕಾರಣದಿಂದ ಶಿಕ್ಷಣ ನಿಲ್ಲಿಸುವಂತಾಗಬಾರದು. ಇಂಥ ಪ್ರತಿಭೆಗಳಿಗೆ ಸಮಾಜ ಪ್ರೋತ್ಸಾಹ ಹಾಗು ಸಹಾಯ ಹಸ್ತ ಚಾಚಿದರೆ ಸಮಾಜಕ್ಕೆ ಆಸ್ತಿಯಾಗಬಹುದು.

ಸಹಾಯ ಮಾಡಬಯಸುವವರು

ಸಂಗೀತಾ ಮಾನಪ್ಪ ಲಮಾಣಿ ಸಾ.ಆದರಹಳ್ಳಿ, ಪೊ.ಬಡ್ನಿ, ಕೆನರಾ ಬ್ಯಾಂಕ್ ಶಿರಹಟ್ಟಿ, A,\N.0458108017011, IFSC cod.no.0000458

ಹೀಗಾಗಿ ಸಂಗೀತಾಳಿಗೆ ಸಹಾಯ ಹಸ್ತ ಬೇಕಿದೆ. ಸಹಾಯ ಮಾಡುವ ಮನಸ್ಸುಳ್ಳವರು ಸ್ವಲ್ಪ ಸಹಾಯ ಹಸ್ತ ಚಾಚಿದರೆ ಶಿಕ್ಷಣ ಮೊಟಕುಗೊಳಿಸಲು ಮುಂದಾದ ಸಂಗೀತಾಳಲ್ಲಿ ಮತ್ತೆ ಶಿಕ್ಷಣದ ನೀನಾದ ಹೊರಮ್ಮಿಸಿದಂತಾಗುತ್ತದೆ.

Exit mobile version