ಅಗರಬತ್ತಿ ಮಾರುವ ಕುಟುಂಬದಲ್ಲಿ ಸಾಗರನ ಸಾಧನೆಯ ಸುವಾಸನೆ

ಮುಂಡರಗಿ: ಸಾಧೆನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸಾಧಿಸಬೇಕು ಎನ್ನುವ ಛಲವೊಂದಿದ್ದರೆ, ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಅಗರಬತ್ತಿ ಮಾರುವ ಕುಟುಂಬವೊಂದವರ ಕುವರನ ಕಥೆ ತಾಜಾ ಉದಾಹರಣೆ.

ಸಾಧನೆ ಮಾಡಲು ಸತತವಾದ ಪ್ರಯತ್ನ ಬೇಕು. ಜೊತೆಗೆ ತಾಳ್ಮೆ ಬೇಕು. ಈ ನಿಟ್ಟಿನಲ್ಲಿ ಮುಂಡರಗಿ ಪಟ್ಟಣದ ಸಾಗರ್ ಎನ್ನುವ ಯುವಕನ ಸಾಧನೆಯ ಹಾದಿಯ ಕಥೆ ಮಾತ್ರ ಪ್ರತಿಯೊಬ್ಬ ಯುವಕರಿಗೆ ಸ್ಪೂರ್ತಿದಾಯಕ.

ಇತ್ತಿಚೆಗೆ ಪ್ರಕಟವಾದ ಪಿಎಸ್ಐ ಪರೀಕ್ಷೆ ಫಲಿತಾಂಶದಲ್ಲಿ ಸಾಗರ್ ರಾಜ್ಯಕ್ಕೆ 173ನೇ ರ‌್ಯಾಂಕ್ ಪಡೆಯುವ ಮೂಲಕ ಬಡತನದಲ್ಲಿ ಅರಳಿದ ಗುಲಾಬಿಯಾಗಿದ್ದಾನೆ.

ಕನ್ನಡ ಮಾದ್ಯಮದಲ್ಲಿ ಓದು

ಸಾಗರ್, ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ, ಪ್ರೌಢ, ಹಾಗೂ ಪದವಿ ಶಿಕ್ಷಣವನ್ನು ಪಡೆದಿದ್ದಾನೆ. ಯಾವುದೇ ಕೋಚಿಂಗ್ ಇಲ್ಲದೆ ಸತತ ಪರಿಶ್ರಮದಿಂದ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿರುವುದು ವಿಶೇಷವೇ ಸರಿ.

ಆನ್ ಲೈನ್ ಶಿಕ್ಷಣವೇ ಆಧಾರ

ಆನ್ ಲೈನ್ ಮೂಲಕ ಪಠ್ಯ ಪುಸ್ತಕ ಹಾಗೂ ಹಳೆ ಪ್ರಶ್ನೆಪತ್ರಿಕೆಯನ್ನು ಮೊಬೈಲ್ ಸಹಾಯದಿಂದ ತಗೆದುಕೊಂಡು ನಿರಂತವಾಗಿ ಅಭ್ಯಾಸಮಾಡಿ ಪಿಎಸ್ಐ ಹುದ್ದೆಯ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಇವರು ಮೊದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲ ತಿಂಗಳ ಕಾರ್ಯ ನಿರ್ವಹಿಸಿದ್ದಾರೆ.

ಅಗರಬತ್ತಿ ಮಾರಾಟವೇ ಕುಟುಂಬಕ್ಕೆ ಆಧಾರ

ಸಾಗರ್ ಕುಟುಂಬಕ್ಕೆ ಅಗರಬತ್ತಿ ವ್ಯಾಪಾರವೇ ಮೂಲ ವೃತ್ತಿ. ಕುಟುಂಬದ ಜೊತೆಗೆ ತಾನೂ ಕೂಡ ಅಗರಬತ್ತಿ ತಯಾರಿಕೆಯ ಕಾಯಕದಲ್ಲಿ ಸಾಗರ್ ಕೈ ಜೋಡಿಸುತ್ತಿದ್ದ. ಬಡತನದ ಬೇಗೆಯಲ್ಲಿಯೇ ಛಲ ಬಿಡದೇ ಓದಿದ ಪರಿಣಾಮ ಈಗ ಪಿಎಸ್ಐ ಆಗಿ ಆಯ್ಕೆಯಾಗುವಂತೆ ಮಾಡಿತು. ಈ ಮೂಲಕ ಮುಂಡರಗಿ ಜನರಿಂದ ಸಾಗರ್ ಸೈ ಎನಿಸಿಕೊಂಡಿದ್ದಾರೆ.

ತಂದೆ ವಾಸುಜಿ ತಾಯಿ ಲಕ್ಷ್ಮೀ ಅವರು ಕೂಡ ಮಗನ ಬಗ್ಗೆ ಅಪಾರ ಕನಸು ಕಟ್ಟಿಕೊಂಡಿದ್ದರು. ಆದರೆ ಈಗ ಮಗನ ಸಾಧನೆಯಿಂದ ತಂದೆ-ತಾಯಿ, ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಸಾಗರ ಸಾಧನೆಯ ಹಾದಿ ಹೀಗೆ ಸಾಗಲಿ ಎಂಬುದು ಉತ್ತರಪ್ರಭದ ಹಾರೈಕೆ.

Exit mobile version