ಬುಧವಾರ ಭಾರತಕ್ಕೆ ಬರಲಿವೆ ರಫೇಲ್ ಯುದ್ಧ ವಿಮಾನ: ಸದ್ಯ ಫ್ರಾನ್ಸ್ ಬಿಟ್ಟಿವೆ ಫೈಟರ್ ಜೆಟ್ಸ್

ಇಂದು ಸೋಮವಾರ ಫ್ರಾನ್ಸ್ ನಿಂದ ಹೊರಟಿರುವ ಮೊದಲ ಬ್ಯಾಚಿನ ರಫೇಲ್ ಯುದ್ಧ ವಿಮಾನಗಳು ಬುಧವಾರ ಭಾರತೀಯ ರಕ್ಷಣಾ ಪಡೆಯನ್ನು ಸೇರಲಿವೆ.

ನವದೆಹಲಿ: ಫ್ರಾನ್ಸ್ ಬಿಟ್ಟಿರುವ 5 ರಫೇಲ್ ಯುದ್ಧ ವಿಮಾನಗಳು 7 ಸಾವಿರ ಕಿಮೀ ದೂರ ಕ್ರಮಿಸಿ ಬುಧವಾರ ಭಾರತವನ್ನು ತಲುಪಲಿವೆ. ಯುಎಇನಲ್ಲಿರುವ ಫ್ರಾನ್ಸ್ ಏರ್ ಬೇಸ್ ನಲ್ಲಿ ಇಳಿದು ನಂತರ ಭಾರತ ತಲುಪಲಿವೆ.

ಎವಿಯೇಷನ್ ಕಂಪನಿ ಡಸಾಲ್ಟ್ ನಿರ್ಮಿಸಿರುವ ಈ ಅತ್ಯಾಧುನಿಕ ಫೈಟರ್ ಜೆಟ್ಸ್ ದಕ್ಷಿಣ ಫ್ರಾನ್ಸಿನ ಬ್ರೊಡಾಕ್ಸ್ ನಗರದಿಂದ ಪ್ರಯಾಣ ಬೆಳೆಸಿವೆ. 2016ರಲ್ಲಿ ಭಾರತವು ಫ್ರಾನ್ಸ್ ಕಂಪನಿ ಡಸಾಲ್ಟ್ ಕಂಪನಿಯಿಂದ ಇಂತಹ 36 ವಿಮಾನಗಳನ್ನು ಖರೀದಿಸಲು 59 ಸಾವಿರ ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತ್ತು. ಅದರ ಮೊದಲ ಭಾಗವಾಗಿ ಈಗ 5 ವಿಮಾನಗಳು ದೇಶದ ಸೇನೆಯ ಭಾಗವಾಗಲಿವೆ.

12 ಭಾರತೀಯ ವಾಯುಪಡೆಯ ಪೈಲಟ್ ಗಳು ಮತ್ತು ಎಂಜಿನಿಯರಿಂಗ್ ಸಿಬ್ಬಂದಿ ಈಗಾಗಲೇ ರಫೆಲ್ ಚಾಲನೆ, ಬಳಕೆಯ ತರಬೇತಿ ಪಡೆದಿದ್ದಾರೆ. ಸದ್ಯ 10 ವಿಮಾನಗಳಲ್ಲಿ ಐದನ್ನು ತರಬೇತಿಯ ಉದ್ದೇಶದಿಂದ ಫ್ರಾನ್ಸಿನಲ್ಲೇ ಉಳಿಸಲಾಗಿದೆ. 2021ರೊಳಗೆ ಎಲ್ಲ 36 ವಿಮಾನಗಳು ದೇಶದ ವಾಯುಪಡೆಯನ್ನು ಸೇರಲಿವೆ ಎಂದು ಫ್ರಾನ್ಸಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯ ಸೇನೆಯ ಅಗತ್ಯಕ್ಕೆ ಅನುಗುಣವಾಗಿ ಈ ವಿಮಾನಗಳಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ. ಇನ್ಫ್ರಾ ರೆಡ್ ಸರ್ಚ್, 10 ತಾಸು ಹಾರಾಟದ ಡೇಟಾ ಸಂಗ್ರಹಣೆ, ಟ್ರೇಸಿಂಗ್ ಮುಂತಾದ ಆಧುನಿಕ ಸೌಲಭ್ಯಗಳನ್ನು ಈ ವಿಮಾನಗಳು ಹೊಂದಿವೆ.

ಈ ಯುದ್ಧ ವಿಮಾನ ಖರೀದಿಯಲ್ಲಿ ಪಾರದರ್ಶಕತೆ ಇಲ್ಲ, ಅನಿಲ್ ಅಂಬಾನಿಯ ಹಿತಾಸಕ್ತಿ ಕಾಪಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಸುಪ್ರೀಕೋರ್ಟ್ ಈ ಖರೀದಿಗೆ ಕ್ಲೀನ್ ಚಿಟ್ ನೀಡಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು.

Exit mobile version