ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಚೀನಾಕ್ಕೆ ನೀಡುತ್ತಿದೆ ಭಾರತ?

ಲಡಾಖ್‌: ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಗಡಿ ಕ್ಯಾತೆ ಮುಂದುವರೆದ ನಡುವೆಯೇ ಭಾರತ ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಚೀನಾಕ್ಕೆ ನೀಡಿದೆ.

ಭಾರತೀಯ ಸೇನೆಯ ಎಂಜಿನಿಯರಿಂಗ್‌ ವಿಭಾಗ ಗಲ್ವಾನ್‌ ನದಿಗೆ 60 ಮೀಟರ್‌ ಉದ್ದನೆಯ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದೆ. ಅಲ್ಲದೇ, ಈ ಸೂಕ್ಷ್ಮ ಪ್ರದೇಶದ ಮೇಲೆ ಭಾರತ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದಂತಾಗಿದೆ. ಇದರೊಂದಿಗೆ ಭಾರತದ ಯುದ್ಧ ವಿಮಾನಗಳು ಗಡಿಯಲ್ಲಿ ಹಾರಾಟ ನಡೆಸಿ ಹದ್ದಿನ ಕಣ್ಣಿಟ್ಟಿವೆ.

ಗಲ್ವಾನ್‌ ನದಿ-ಶ್ಯೊಕ್‌ ನದಿ ಒಗ್ಗೂಡುವ ಸ್ಥಳದಿಂದ ಪೂರ್ವಕ್ಕೆ 3 ಕಿ.ಮೀ ಹಾಗೂ ಗಸ್ತು ಪಾಯಿಂಟ್‌ 14 (ಜೂನ್‌ 15ರಂದು ಮಾರಾಮಾರಿ ನಡೆದ ಸ್ಥಳ)ದಿಂದ 2 ಕಿ.ಮೀ ದೂರದಲ್ಲಿ ಸೇತುವೆ ನಿರ್ಮಾಣವಾಗಿದೆ. ಲಡಾಖ್‌ ಸಂಘರ್ಷವು ದಕ್ಷಿಣ ಚೀನಾ ಸಮುದ್ರ ವಿವಾದದಂತೆ ಅಲ್ಲ. ನಮ್ಮ ತಂಟೆಗೆ ಬಂದರೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಒಪ್ಪಂದಗಳಿಗೆ ಬದ್ಧವಾಗಿ ನಡೆದುಕೊಳ್ಳಿ ಎಂದು ಭಾರತದ ಅಧಿಕಾರಿಗಳ ತಂಡವು ಚೀನಾಕ್ಕೆ ಖಡಕ್‌ ಎಚ್ಚರಿಕೆ ನೀಡಿದೆ.

ಗಲ್ವಾನ್‌ ಕಣಿವೆಯಲ್ಲಿ ಚೀನಾ ಪುಂಡಾಟಕ್ಕೆ ತಕ್ಕ ಪ್ರತ್ಯುತ್ತರ ನೀಡಲು ನಿಶ್ಚಯಿಸಿರುವ ಭಾರತೀಯ ವಾಯುಪಡೆ ತನ್ನ ಯುದ್ಧ ವಿಮಾನಗಳನ್ನು ಮುನ್ನೆಲೆಗೆ ತಂದು ಸನ್ನದ್ಧವಾಗಿಸಿದೆ. ಸುಖೋಯ್‌-30 ಎಂಕೆಐ, ಮಿರಾಜ್‌-2000, ಜಾಗ್ವಾರ್‌ ಯುದ್ಧ ವಿಮಾನಗಳು, ಅಪಾಚೆ ಹೆಲಿಕಾಪ್ಟರ್‌ ಹಾರಾಟ ನಡೆಸಿವೆ.

ಚೀನಾ ದೇಶ ನಮ್ಮ ದೇಶದ ಒಂದಿಂಚು ಭೂ ಭಾಗವನ್ನೂ ಅತಿಕ್ರಮಿಸಿಲ್ಲ. ಏಕಕಾಲದಲ್ಲಿ ಹಲವು ಕಡೆ ಸಂಚರಿಸಿ ದಾಳಿ ನಡೆಸಬಲ್ಲ ಸಾಮರ್ಥ್ಯ ಭಾರತದ ಸಶಸ್ತ್ರ ಪಡೆಗಳಿಗೆ ಇದೆ ಎಂದು ಮೋದಿ ಹೇಳಿದ್ದಾರೆ.

Exit mobile version