ಪಚನ ಶಕ್ತಿ ವೃದ್ಧಿಗೆ ಮೊಳಕೆ ಒಡೆದ ಹೆಸರು ಕಾಳು

greengram health lifestyle

ಪಚನ ಶಕ್ತಿ ವೃದ್ಧಿಗೆ ಮೊಳಕೆ ಒಡೆದ ಹೆಸರು ಕಾಳು

ಸದ್ಯ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಹಾಮಾರಿ ತಡೆಗಟ್ಟಲು ಆತ್ಮವಿಶ್ವಾಸದ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಾಗಿ ಬೇಕಾಗುತ್ತದೆ. ಇದಕ್ಕಾಗಿ ಸಾರ್ವಜನಿಕರು ಜಾಗೃತಿ ವಹಿಸುವ ಅಗತ್ಯತೆ ತುಂಬಾ ಇದೆ.

ಮಕ್ಕಳು, ವೃದ್ಧರು ಸೇರಿದಂತೆ ಎಲ್ಲ ವಯಸ್ಸಿನವರು ಇಮ್ಯೂನಿಟಿ ಪವರ್ ಹೆಚ್ಚಿಸುವ ಆಹಾರದತ್ತ ಹೆಚ್ಚಿನ ಗಮನ ಹರಿಸುವ ಅಗತ್ಯತೆ ಈ ಸಂದರ್ಭದಲ್ಲಿ ತುಂಬಾ ಇದೆ. ಇದಕ್ಕೆ ರಾಮಬಾಣ ಎಂಬಂತೆ ವರ್ತಿಸುವ ಹೆಸರುಕಾಳನ್ನು ಜನರು ಹೆಚ್ಚಾಗಿ ಬಳಸುವ ಅವಶ್ಯಕತೆ ಇದೆ.

ಹೆಸರು ಕಾಳನ್ನು ಬೇಯಿಸಿ ತಿನ್ನುವುದಕ್ಕಿಂತಲೂ ಮೊಳಕೆ ಮಾಡಿ ತಿಂದರೆ ಆರೋಗ್ಯ ವೃದ್ಧಿಯಾಗುತ್ತದೆ. ಹೆಸರುಕಾಳಿನಲ್ಲಿ ವಿಟಮಿನ್ ಸಿ, ಪ್ರೋಟೀನ್, ಕಬ್ಬಿಣದ ಅಂಶ, ಫೈಬರ್ ಪೋಷಕಾಂಶ ಇರುತ್ತದೆ. ಹೀಗಾಗಿ ಮೊಳಕೆ ಕಾಳನ್ನು ಸೇವಿಸಿದರೆ ರಕ್ತದೊತ್ತಡ ಕೂಡ ಕಡಿಮೆ ಮಾಡುತ್ತದೆ. ಒಂದು ವೇಳೆ ಹೆಸರುಕಾಳನ್ನು ಬೇಯಿಸಿ ಸೇವಿದರೆ ಅದರ ಪೋಷಕಾಂಶ ದೇಹಕ್ಕೆ ಸಿಗುವುದಿಲ್ಲ. ಹೀಗಾಗಿ ಅದನ್ನು ಮೊಳಕೆ ಬರಿಸಿ ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ.

ಹೆಸರು ಕಾಳನ್ನು ಚೆನ್ನಾಗಿ ತೊಳೆಯಬೇಕು. ಒಂದು ಬೌಲ್ಗೆ ನೀರು ಹಾಕಿ ಹೆಸರುಕಾಳನ್ನು ಸುಮಾರು 8 ರಿಂದ 12 ಗಂಟೆಗಳವರೆಗೂ ನೆನೆಸಿ ಇಡಬೇಕು. 12 ಗಂಟೆಯ ನಂತರ ಕಾಳನ್ನು ಸೋಸಿಕೊಂಡು ಒಂದು ಬಟ್ಟೆ ತೆಗೆದುಕೊಂಡು ನೆನೆಸಿದ ಕಾಳು ಹಾಕಿ ಮೊಳಕೆಯೊಡೆಯಲು ಬಿಡಬೇಕು. ನಂತರ ಅದನ್ನು ಹಸಿಯಾಗಿಯೇ ಸೇವಿಸಬೇಕು.

ಮೊಳಕೆ ಬಂದ ಹೆಸರು ಕಾಳನ್ನು ಸೇವಿಸುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತದೆ. ಇದರಲ್ಲಿರುವ ಪೌಷ್ಟಿಕಾಂಶ ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತದೆ. ಅಲ್ಲದೆ ಫೈಬರ್ ಅಂಶವು ದೇಹದಲ್ಲಿ ಆಹಾರದ ಸಂಚಾರ ಸರಿಯಾಗಿ ಆಗುವಂತೆ ನೋಡಿಕೊಂಡು ಮಲಬದ್ಧತೆ ತೊಂದರೆಯನ್ನು ನಿವಾರಿಸುತ್ತದೆ.

ಜೊತೆಗೆ ಇದರಲ್ಲಿರುವ ವಿಟಮಿನ್ ಸಿ ದೇಹಕ್ಕೆ ಇನ್ಫೆಕ್ಷನ್ ಆಗುವುದನ್ನು ತಡೆಯುತ್ತದೆ. ಇದರ ಜೊತೆ ವಿಟಮಿನ್ ಎ ಅಂಶ ಕೂಡ ಹೆಚ್ಚಾಗಿ ಇರೋದ್ರಿಂದ ದೇಹಕ್ಕೆ ಹೆಚ್ಚಿನ ಆಂಟಿ ಆಕ್ಸಿಡೆಂಟ್ಸ್ ಸಿಗುವ ರೀತಿ ನಿಗಾವಹಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ಜನರು ಮೊಳಕೆಯೊಡೆದ ಕಾಳನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Exit mobile version