ಪಿಯುಸಿ ಸರ್ಕಾರಿ ಕಾಲೇಜುಗಳು ‘ಫೇಲ್’: ದೆಹಲಿ ಸರ್ಕಾರಿ ಶಾಲೆಗಳ ಮೇಲುಗೈ

puc result

PUC Government Colleges Fail

ರಾಜ್ಯದ ಪಿಯುಸಿ-2 ಫಲಿತಾಂಶದಲ್ಲಿ ಸರ್ಕಾರಿ ಕಾಲೇಜುಗಳು ಕಳಪೆ ಸಾಧನೆ ಮಾಡಿವೆ. ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ಏನಾಗಬಹುದು ಎಂಬುದನ್ನು ದೆಹಲಿ ಸರ್ಕಾರಿ ಶಾಲೆಗಳು ತೋರಿಸಿ ಕೊಡುತ್ತಿವೆ.

ಗದಗ: ಎರಡು ಫಲಿತಾಂಶಗಳು. ಒಂದು ಸಿಬಿಎಸ್ಸಿ-12 ಮತ್ತೊಂದು ರಾಜ್ಯದ ಪಿಯುಸಿ-2. ಎರಡೂ 12ನೆ ತರಗತಿಗಳೇ. ಈ ವರ್ಷವೂ ರಾಜ್ಯದ ಸರ್ಕಾರಿ ಕಾಲೇಜುಗಳು ಕಳಪೆ ಸಾಧನೆ ಮಾಡಿವೆ. ರಾಜ್ಯದ ಒಟ್ಟು ಫಲಿತಾಂಶ ಶೇ. 61 ರಷ್ಟಾಗಿದ್ದರೆ, ಸರ್ಕಾರಿ ಕಾಲೇಜುಗಳ ಫಲಿತಾಂಶ ಕೇವಲ ಶೇ.46.24.

ಇದೇ ಸಂದರ್ಭದಲ್ಲಿ ಸಿಬಿಎಸ್ಸಿ-12 ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ದೇಶದ ಒಟ್ಟು ಫಲಿತಾಂಶ  ಶೇ. 88.78 ಆಗಿದ್ದರೆ, ದೆಹಲಿಯ ಸರ್ಕಾರಿ ಶಾಲೆಗಳ ಫಲಿತಾಂಶ ಭರ್ಜರಿ ಶೇ. 98 ಕ್ಕೆ ತಲುಪಿದೆ. ಸತತ ಐದನೆ ವರ್ಷ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹಿಂದಿಕ್ಕುತ್ತಲೇ ಇರುವ ದೆಹಲಿ ಸರ್ಕಾರಿ ಶಾಲೆಗಳು ಇಡೀ ದೇಶಕ್ಕೇ ಮಾದರಿಯಾಗಿವೆ.

ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ, ಮೊದಲಿನಿಂದಲೂ ಶಿಕ್ಷಣ, ಆರೋಗ್ಯ, ನೀರು ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತ ಬಂದಿದೆ. ಬಜೆಟ್ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುದಾನ, ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ವಿಶೇಷ ತರಬೇತಿ, ಶಾಲೆಗಳಲ್ಲಿ ಅತ್ಯುತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದ್ದರ ಪರಿಣಾಮವನ್ನು 10 ಮತ್ತು 12ನೆ ತರಗತಿ ಫಲಿತಾಂಶಗಳಲ್ಲಿ ಕಾಣುತ್ತಿದ್ದೇವೆ.

ದೆಹಲಿ ಸರ್ಕಾರಿ ಶಾಲೆಗಳ ಸಿಬಿಎಸ್ಸಿ ಫಲಿತಾಂಶ: 2016- ಶೇ. 85.9, 2017- ಶೇ.88.2, 2018- ಶೇ. 90.6, 2019-ಶೇ. 94.4 ಮತ್ತು ಈ ವರ್ಷ ಶೇ. 98.

ತಮ್ಮ ಮನೆ ಮಕ್ಕಳ ಯಶಸ್ಸು ಎಂಬಂತೆ ಖುಷಿಗೊಂಡು ದೆಹಲಿ ಸಿಎಂ ಟ್ವೀಟ್ ಮಾಡಿ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ನಮ್ಮ ರಾಜ್ಯ ಸರ್ಕಾರವೂ ಇಚ್ಛಾಶಕ್ತಿ ಪ್ರದರ್ಶಿಸಿದರೆ ಇಲ್ಲಿಯೂ ಅಂತಹ ಸಾಧನೆ ಸಾಧ್ಯ.ಆದರೆ ಇಲ್ಲಿ ಅಂತಹ ಒಳನೋಟಗಳ, ಕಾಳಜಿಗಳ ನಾಯಕರ ಕೊರತೆ ಇದೆ.

Exit mobile version