ಕೊರೋನಾ ಚಿಕಿತ್ಸೆಗೆ ಆಶಾದಾಯಕ ಆಯುರ್ವೇದ ಮಾತ್ರೆ?

ಬೆಂಗಳೂರು: ಕೋವಿಡ್-19 ಸೋಂಕಿನಿಂದ ಗುಣಪಡಿಸಲು ಬೆಂಗಳೂರಿನ ಆಯುರ್ವೇದ ವೈದ್ಯರೊಬ್ಬರು ಸಣ್ಣದೊಂದು ಹೆಜ್ಜೆ ಇಟ್ಟಿದ್ದಾರೆ. ಭೌಮ್ಯ ಮತ್ತು ಸಾಸ್ತೈ ಎಂಬ ಹೆಸರಿನ ಮಾತ್ರೆಗಳನ್ನು ಸಂಶೋಧಿಸಿದ್ದು, ಇದಕ್ಕೆ ಇನ್ನೂ ಅಪ್ರೂವಲ್ ಸಿಕ್ಕಿಲ್ಲ ಎಂಬುದನ್ನು ಆ ವೈದ್ಯರೇ ಸ್ಪಷ್ಟಪಡಿಸಿದ್ದಾರೆ.

ನಗರದ ಡಾ. ಗಿರಿಧರ್ ಕಜೆ ಎಂಬುವವರು 14 ಔಷಧಿ ಸಸ್ಯಗಳ ಪದಾರ್ಥಗಳಿಂದ ಮಾತ್ರೆ ತಯಾರಿಸಿದ್ದು, ನಗರದ ವಿಕ್ಟೋರಿಯಾ-ಕೋವಿಡ್ ಆಸ್ಪತ್ರೆಯಲ್ಲಿ ಹತ್ತು ಪಾಸಿಟಿವ್ ರೋಗಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಅವರೆಲ್ಲ 3-10 ದಿನದಲ್ಲಿ ಗುಣಮುಖರಾಗಿದ್ದು, ಈಗ ಅವರ ವರದಿ ನೆಗೆಟಿವ್ ಬಂದಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಕೋವಿಡ್ ಎಥಿಕ್ಸ್ ಕೋರ್ ಕಮಿಟಿ ಕ್ಲಿನಿಕಲ್ ಟ್ರಯಲ್ಸ್ ಗೆ ಅನುಮತಿ ನೀಡಿತ್ತು. ಆಯುರ್ವೇದ ಮತ್ತು ಆಯುಷ್‌ನಲ್ಲಿ ಕೊರೋನಾಕ್ಕೆ ಔಷಧಿ ಕಂಡು ಹಿಡಿಯುವ ಪ್ರಯೋಗಗಳು ನಡೆದಿವೆ. ಈಗ ಈ ಮಾತ್ರೆಗಳನ್ನು ನಿಗದಿತ ಚಿಕಿತ್ಸೆಯಲ್ಲಿ ಪೂರಕವಾಗಿ ನೀಡಬಹುದಷ್ಟೇ. ಸದ್ಯಕ್ಕೆ ಇನ್ನಷ್ಟು ಪ್ರಯೋಗಗಳು ನಡೆಯಬೇಕು ಎಂದು ಸಮಿತಿ ಸದಸ್ಯೆ ಡಾ. ಸ್ಮಿತಾ ತಿಳಿಸಿದ್ದಾರೆ.

ಯಾವುದೇ ಹೊಸ ಔಷಧಿ ಅಪ್ರೂವಲ್ ಪಡೆಯಬೇಕಾದರೆ ಸಾಕಷ್ಟು ಸಂಖ್ಯೆಯ ರೋಗಿಗಳ (ಸ್ಯಾಂಪಲ್ ಸೈಜ್ ದೊಡ್ಡದಾಗಿರಬೇಕು) ಮೇಲೆ ಅದನ್ನು ಪ್ರಯೋಗಿಸಿ ಯಶಸ್ಸು ಪಡೆಯಬೇಕು. ಹೀಗಾಗಿ ಡಾ. ಗಿರಿಧರ್ ಅವರು ವಿಭಿನ್ನ ವಯೋಮಾನದ ಸಾವಿರಾರು ಪಾಸಿಟಿವ್‌ಗಳ ಮೇಲೆ ಪ್ರಯೋಗ ಮಾಡಿ ಯಶಸ್ಸು ಕಂಡ ನಂತರವಷ್ಟೇ ಇದರ ಮಾರಾಟ ಅನುಮತಿ ಸಿಗಲಿದೆ.

Exit mobile version