ಗದಗ ಜಿಲ್ಲೆಯಲ್ಲಿ 2 ಸಾವಿರ ತೋಟ ನಿರ್ಮಾಣ ಗುರಿ: ಜಿ.ಪಂ ಅಧ್ಯಕ್ಷ ರಾಜೂಗೌಡ


ಗದಗ: ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರದಂತೆ ತಡೆಯಬೇಕು. ಅದಕ್ಕಾಗಿ ಜಿಲ್ಲೆಯ ಯುವ ರೈತರನ್ನು ತೋಟಗಾರಿಕೆ ಬೆಳಗಳ ಕಡೆಗೆ ಆಕರ್ಷಿತರನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2 ಸಾವಿರ ಹೊಸ ತೋಟಗಳನ್ನು ನಿರ್ಮಿಸಲು ತೋಟಗಾರಿಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಸೂಚಿಸಿದರು.

ಜಿಲ್ಲಾಡಳಿತ ಭವನದ, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ತೋಟಗಾರಿಕೆ ಯೋಜನೆಗಳ ಕುರಿತು ಜರುಗಿದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರ
ಕಳೆದ ಸಾಲಿನಲ್ಲಿ ನೆರೆಯಿಂದಾಗಿ ಜಿಲ್ಲೆಯ ರೈತರ ತೋಟಗಳು ವಿನಾಶದ ಅಂಚಿಗೆ ತಲುಪಿವೆ. ಅವುಗಳಿಗೆ ಇಲಾಖೆಯಲ್ಲಿ ಇರುವ ಯೋಜನೆಗಳನ್ನು ಬಳಸಿಕೊಂಡು ತೋಟಗಳನ್ನು ಯಾವ ರೀತಿಯಲ್ಲಿ ಮರುನಿರ್ಮಾಣ ಮಾಡಬಹುದು, ನರೇಗಾದಲ್ಲಿ ತೋಟಗಾರಿಕೆಗೆ ಹೇಗೆ ಪ್ರೋತ್ಸಾಹಿಸಬಹುದು ಎಂಬುದರ ಕುರಿತು ಚರ್ಚಿಸಿದರು.
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ತೋಟಗಾರಿಕೆ ಪ್ರದೇಶ ವೃದ್ಧಿಸಲು ಬಳಸುವ ಬಗ್ಗೆ ಪರಿಶೀಲಿಸಿದ ಅವರು, ಜಿಲ್ಲೆಯ ಕೂಲಿ ಕಾರ್ಮಿಕರು ಬೆರೆಡೆ ವಲಸೆ ಹೊಗದಂತೆ ವರ್ಷ ಪೂರ್ತಿ ಉದ್ಯೋಗ ದೊರೆಯುವಂತೆ ತೋಟಗಾರಿಕೆ ಕ್ಷೇತ್ರವು ಬೆಳೆಯಬೇಕು ಎಂದರು.

ತೋಟಗಾರಿಕೆ ಕ್ಷೇತ್ರವು ಅಧಿಕವಾದರೆ ರೈತರಿಗೆ ವರ್ಷ ಪೂರ್ತಿ ಆದಾಯದ ಮೂಲ ದೊರೆತಂತಾಗುವುದು. ಜಿಲ್ಲೆಯ ಯುವ ರೈತರಿಗೆ ತೋಟಗಾರಿಕೆಯಲ್ಲಿ ಇರುವ ವಿಪುಲ ಅವಕಾಶಗಳ ಬಗ್ಗೆ ಅರಿವು ಮೂಡಿಸಿ, ತೋಟ ನಿರ್ಮಾಣಕ್ಕೆ ಮುಂದಾಗುವಂತೆ ಅಧಿಕಾರಿಗಳು ಪ್ರೋತ್ಸಾಹ ನೀಡಬೇಕು ಎಂದರು.

ಯುವ ರೈತ ಸಮುದಾಯವನ್ನು ಒಂದೆಡೆ ಸೇರಿಸಿ ಜಿಲ್ಲೆಯಲ್ಲಿ ತೋಟಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದ ರೈತರೊಂದಿಗೆ ಸಂವಾದ ನಡೆಸಬೇಕು. ಇದರಿಂದ ರೈತರು ಪ್ರೇರಣೆ ಪಡೆದು ತೋಟ ನಿರ್ಮಾಣಕ್ಕೆ ಮುಂದಾಗುವರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆಗೆ ಪ್ರಾಸ್ಥಾಪನೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಸಂಗ್ರಹ ಹಾಗೂ ಸಂರಕ್ಷಣೆಗಾಗಿ ಶೀಥಲಿಕರಣ ಘಟಕ (ಕೋಲ್ಡ್ ಸ್ಟೋರೆಜ್) ಅಗತ್ಯವಿದ್ದು, ಶೀಥಲಿಕರಣ ಘಟಕ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹಾಗೂ ಹಿರಿಯ ಶಾಸಕ ಹೆಚ್.ಕೆ.ಪಾಟೀಲ ಅವರೊಂದಿಗೆ ಚರ್ಚಿಸಿ, ಅವರ ಮಾರ್ಗದರ್ಶನದಂತೆ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲಾಗುವುದು. ರಾಜೂಗೌಡ ಕೆಂಚನಗೌಡ್ರ, ಜಿ.ಪಂ ಅಧ್ಯಕ್ಷ

ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶೈಲೇಂದ್ರ ಬೀರಾದರ ಸೇರಿದಂತೆ ತಾಲ್ಲೂಕುಗಳ ತೋಟಗಾರಿಕೆ ಸಹಾಯಕ ನಿರ್ದೇಶಕರು ಹಾಜರಿದ್ದರು.

Exit mobile version