ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು ಗೊತ್ತಾ..?

ಮುಖವು ಪ್ರತಿಯೊಬ್ಬರ ಸೌಂದರ್ಯದ ಕೈಗನ್ನಡಿ. ಮುಖದ ಲಕ್ಷಣ ಕಂಡೇ ಮನುಷ್ಯನ ಗುಣ ಅಳಿಯಬಹುದು ಎನ್ನುತ್ತಾರೆ. ಜೀವನದಲ್ಲಿ ಕಷ್ಟ ಗಳಿಲ್ಲದೆ, ಯಾವುದೇ ಕೆಟ್ಟ ಆಲೋಚನೆಗಳಿಲ್ಲದೆ ಸಂತೋಷವಾಗಿರುವವರ ಮುಖ ನೋಡಲು ಅರಳಿದ ಮಲ್ಲಿಗೆಯಂತೆ ಇರುತ್ತದೆ.

ಹೊಳಪು ಮತ್ತು ಸೌಂದರ್ಯಕ್ಕೆ ಆಹಾರ ಪದ್ಧತಿಯೇ ಕಾರಣ ಎನ್ನುತ್ತಾರೆ. ವಿಜ್ಞಾನದಲ್ಲಿ ಕೂಡ ಇದು ಸಾಬೀತಾಗಿದೆ. ಸಾಧ್ಯವಾದಷ್ಟು ಹೆಚ್ಚಿನ ನೀರಿನ ಅಂಶ, ನಾರಿನ ಅಂಶ, ಪೌಷ್ಟಿಕ ಅಂಶ ಇರುವ ಆಹಾರಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ನಮ್ಮ ಇಡೀ ದೇಹದ ಚರ್ಮ ತನ್ನ ಸೌಂದರ್ಯವನ್ನು ಕಾಪಾಡಿ ಕೊಳ್ಳುವುದು ಮಾತ್ರವಲ್ಲದೆ ಆರೋಗ್ಯಕರವಾಗಿ ಇರುತ್ತದೆ.

ಮುಖದ ಸೌಂದರ್ಯಕ್ಕೆ ಇನ್ನೊಂದು ಮುಖ್ಯವಾದ ಅಂಶ ಸಹಾಯಕ್ಕೆ ಬರುವುದು ಎಂದರೆ ದಿನದಲ್ಲಿ ಎಷ್ಟು ಬಾರಿ ಮುಖದ ಭಾಗದ ಸ್ವಚ್ಛತೆಗೆ ನಾವು ಒತ್ತು ಕೊಡುತ್ತೇವೆ ಎಂಬುದು. ಒಣ ಚರ್ಮ ಹೊಂದಿರುವವರಿಗಿಂತ ಎಣ್ಣೆ ಚರ್ಮ ಹೊಂದಿರುವವರು ಒಂದು ದಿನಕ್ಕೆ ಎರಡು ಬಾರಿ ಮುಖ ತೊಳೆದರೆ ಸಾಮಾನ್ಯವಾಗಿ ಮುಖದ ಸೌಂದರ್ಯ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ.

ಎರಡಕ್ಕಿಂತ ಹೆಚ್ಚು ಬಾರಿ ಮುಖ ತೊಳೆದರೆ ಚರ್ಮಕ್ಕೆ ಖಂಡಿತವಾಗಿ ಹಾನಿಯಾಗುತ್ತದೆ ಎಂದು ಸೌಂದರ್ಯ ತಜ್ಞರು ಎಚ್ಚರಿಕೆ ಕೊಡುತ್ತಾರೆ. ಒಣ ಚರ್ಮ ಹೊಂದಿರುವವರು ಪ್ರತಿ ದಿನ ಒಂದು ಬಾರಿ ಮುಖ ತೊಳೆದರೆ ಸಾಕಾಗುತ್ತದೆ. ಹಾಗಾದರೆ ನಮ್ಮ ಮುಖ ನಾವು ತೊಳೆದುಕೊಳ್ಳಲು ನೀತಿ ನಿಯಮಗಳಿವೆಯೇ ಎಂದು ನೀವು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಿರಬಹುದು. ಖಂಡಿತ ಇದೆ. ಬೇಸಿಗೆ ಕಾಲದಲ್ಲಿ, ಮಳೆಗಾಲದಲ್ಲಿ, ಚಳಿಗಾಲದಲ್ಲಿ ಮುಖ ತೊಳೆಯುವ ಪ್ರಕ್ರಿಯೆ ಬದಲಾಯಿಸಬೇಕಾಗುತ್ತದೆ.

ಬೆಳಗ್ಗೆ ಹಾಸಿಗೆಯಿಂದ ಎದ್ದ ಮೇಲೆ ಯಾವುದೇ ಆಹಾರವನ್ನು ಸೇವಿಸುವ ಮೊದಲು ಹಲ್ಲುಜ್ಜಿ ಸ್ವಚ್ಛವಾದ ನೀರಿನಿಂದ ಮೊದಲು ಮುಖ ತೊಳೆದುಕೊಳ್ಳಬೇಕು. ಒಂದು ವೇಳೆ ನಿಮಗೆ ಎಣ್ಣೆ ಚರ್ಮವಿದ್ದರೆ ನಿಮ್ಮ ಚರ್ಮ ರೋಗ ತಜ್ಞರನ್ನು ಯಾವ ಬಗೆಯ ಸೋಪು ಅಥವಾ ಫೇಸ್ ವಾಶ್ ಬಳಸಿದರೆ ನಿಮ್ಮ ಚರ್ಮಕ್ಕೆ ಸೂಕ್ತವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಬೇಕೆಂದರೆ ಮಧ್ಯಾಹ್ನದ ಸಮಯದಲ್ಲಿ ತಂಪಾದ ನೀರಿನಿಂದ ಮುಖ ತೊಳೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.

Exit mobile version