ಚೀನಾದಲ್ಲಿ ಎರಡನೇ ಅಲೆ ಎಬ್ಬಿಸಿದ ಕೊರೊನಾ!


ಬೀಜಿಂಗ್‌ : ಕೊರೊನಾ ಹುಟ್ಟಿಗೆ ಕಾರಣವಾಗಿರುವ ಚೀನಾದಲ್ಲಿ ಎರಡನೇ ಅಲೆ ಶುರುವಾಗಿದೆ. ಏಪ್ರಿಲ್‌ ನಂತರ ಮೊದಲ ಬಾರಿಗೆ 24 ಗಂಟೆಯಲ್ಲಿ 57 ಪ್ರಕರಣಗಳು ವರದಿಯಾಗಿದೆ.
57 ಹೊಸ ಪ್ರಕರಣಗಳ ಪೈಕಿ 37 ಪ್ರಕರಣಗಳು ಚೀನಾದಲ್ಲೇ ವರದಿಯಾಗಿದ್ದು, 20 ಪ್ರಕರಣಗಳು ವಿದೇಶಗಳಿಂದ ಬಂದವರಿಗೆ ಆಗಿದೆ ಎಂದು ಚೀನಾ ಆರೋಗ್ಯ ಸಚಿವಾಲಯ ಹೇಳಿದೆ.
ಬೀಜಿಂಗ್‌ನಲ್ಲಿ 36 ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಮೀನು ಮತ್ತು ತರಕಾರಿಗೆ ಹೆಸರಾಗಿರುವ ಬೀಜಿಂಗ್‌ನ ಜಿನ್ ಫಾದಿ ಹೋಲ್‌ ಸೇಲ್‌ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಈ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಹೊಸ ಸೋಂಕು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ಮಾಡಲಾಗಿದೆ.
ಮಾರುಕಟ್ಟೆಗೆ ಭೇಟಿ ನೀಡಿದ್ದ ಇಬ್ಬರಲ್ಲಿ ಇತ್ತೀಚಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ 517 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ 45 ಮಂದಿಗೆ ಪಾಸಿಟಿವ್‌ ಬಂದಿದೆ. ಈ 45 ಮಂದಿಯಲ್ಲಿ ಯಾರಿಗೂ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶ ಸಮೀಪದಲ್ಲಿದ್ದ 9 ಶಿಶು ವಿಹಾರಗಳು ಹಾಗೂ ಶಾಲೆಗಳನ್ನು ಮುಚ್ಚಲಾಗಿದ್ದು, ಲಾಕ್‌ಡೌನ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.

Exit mobile version