ಮೀಸಲಾತಿ ಪಟ್ಟಿ: ಕಾರಜೋಳ ಹೇಳಿಕೆ ಸ್ವಾಗತಿಸಿದ ಇಮ್ಮಡಿ ಶ್ರೀ

ಚಿತ್ರದುರ್ಗ: ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿಲ್ಲ ಹಾಗೂ ಬಿಡುವುದಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೊಳ ಹೇಳಿಕೆಯನ್ನು ಸ್ವಾಗತಿಸುತ್ತೇವೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಹೊಸದುರ್ಗ ನಗರದಲ್ಲಿ ಶನಿವಾರ ಪತ್ರ ಚಳುವಳಿ ಕುರಿತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತಾನಾಡಿದ ಅವರು, ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಮೀಸಲಾತಿಯಲ್ಲಿ 1927ರಲ್ಲೇ ಗುರುತಿಸಿ, ಈ ಸಮುದಾಯಗಳ ಅಭ್ಯುದಯಕ್ಕೆ ಬುನಾದಿ ಹಾಕಿದ್ದಾರೆ. ಕಾಲಕ್ರಮೇಣ ಬದಲಾದ ಪ್ರಭುತ್ವ ವ್ಯವಸ್ಥೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ 1950ರಲ್ಲಿ ಆರು ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಗುರುತಿಸಿದ್ದು, ಮೂಲ ಪರಿಶಿಷ್ಟ ಜಾತಿಗಳಾಗಿ ಭೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯಗಳನ್ನು ಗುರುತಿಸಿದ್ದಾರೆ ಎಂದರು.
ಈ ಸಮುದಾಯಗಳು ಅಲೆಮಾರಿ ಹಾಗೂ ಅರೆಅಲೆಮಾರಿ ಮತ್ತು ಶ್ರಮ ಸಂಸ್ಕೃತಿಯ ಸಮುದಾಯಗಳಾದ ಕಾರಣ, ಅಕ್ಷರ ಸಂಸ್ಕೃತಿಯಿಂದ ವಿಮುಖವಾಗಿವೆ. ವಿದ್ಯಾವಂತರ ಕೊರತೆಯಿಂದ ಸರ್ಕಾರಿ ಮೀಸಲಾತಿ ಪ್ರಯೋಜನ ಪಡೆಯುವಲ್ಲಿ ಹಿನ್ನಡೆ ಉಂಟಾಗಿದೆ. ಶೇ.95ರಷ್ಟು ಕುಟುಂಬಗಳಿಗೆ ಇಂದಿಗೂ ಮನೆ, ಆಸ್ತಿ, ಜಮೀನು ಇಲ್ಲ. ಹೊಟ್ಟೆ ಪಾಡಿಗಾಗಿ ಊರೂರು ಅಲೆದು ಜೀವನ ನಡೆಸುತ್ತಿದ್ದಾರೆ ಎಂದರು.
ಈ ಸಮುದಾಯಗಳಿಗೆ ಸೇರಿದವರು ಸರಿಯಾದ ನೆಲೆ ಸಿಗದೆ ಗುಳೆ ಹೋಗಿ ಬದುಕುತ್ತಿದ್ದಾರೆ. ಕಾರಣ ಈ ಸಮುದಾಯಗಳನ್ನು ಗುರುತಿಸಿ ಅಭಿವೃದ್ಧಿ ಪಥದ ಕಡೆಗೆ ತರಲು ವಿಶೇಷ ಯೋಚನೆಯಲ್ಲಿ ಅಭಿವೃದ್ಧಿ ನಿಗಮಕ್ಕೆ ಚಾಲನೆ ನೀಡಿದೆ. ಅನೇಕ ಕಾರಣಗಳಿಂದ ಮೀಸಲಾತಿ ಪ್ರಾರಂಭವಾದ ದಿನಗಳಿಂದ ಇಲ್ಲಿಯವರೆಗೆ ಶೇಕಡ 11% ರಷ್ಟು ಅಭಿವೃದ್ಧಿ ಆಗಬೇಕಿತ್ತು. ಆದರೆ ಅಭಿವೃದ್ಧಿ ಆಗಿರುವುದು ಶೇಕಡ 3% ಮಾತ್ರ. ಈ ವಿಚಾರ ಸರ್ಕಾರಿ ಅಂಕಿಅಂಶಗಳಲ್ಲಿ ಇರುವುದನ್ನು ಗಮನಿಸಿ ಸರ್ಕಾರ ಭೋವಿ ಲಂಬಾಣಿ ಕೊರಮ ಕೊರಚ ಸಮೂದಾಯಗಳನ್ನು ಸಂವಿಧಾನಿಕ ಪರಿಶಿಷ್ಟ ಜಾತಿಗಳಾಗಿ ಸಂರಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಚಂದ್ರಪ್ಪ, ಮಂಜಣ್ಣ, ರಂಗಪ್ಪ, ಶೇಖರಪ್ಪ, ತಿಪ್ಪೇಸ್ವಾಮಿ, ಕುಮಾರ ಇನ್ನಿತರರು ಉಪಸ್ಥಿತರಿದ್ದರು.

Exit mobile version