ಪತ್ರ ಚಳುವಳಿಗೆ ಕರೆ ನೀಡಿದ ಭೋವಿ ಶ್ರೀಗಳು


ಚಿತ್ರದುರ್ಗ: ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರ ಈ ಸಮುದಾಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ರಾಜ್ಯ ಸರ್ಕಾರದ ವಿವರಣೆ ಹೀಗಿದೆ: “ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರವಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ, ‘ಸೂಕ್ತ ಪ್ರಾಧಿಕಾರದ (NCSC) ಮುಂದೆ ಹಾಜರಾಗಲು’ ಸೂಚನೆ ನೀಡಿ, ಸರ್ವೋಚ್ಛ ನ್ಯಾಯಾಲಯ ಸದರಿ ಅರ್ಜಿಯನ್ನು 14-2-2020ರಂದು ವಿಲೇವಾರಿ ಮಾಡಿದೆ” ಎಂದು ಹೇಳಲಾಗಿದೆ.
ಜೊತೆಗೆ, “ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ, ದೆಹಲಿ, ಇವರ ಅರ್ಜಿಯನ್ನು ಸ್ವೀಕರಿಸಿ, NCSC ಇಂದ, ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಬೆಂಗಳೂರು. ಇವರಿಗೆ ಬರೆದ ಪತ್ರ ಸಂಖ್ಯೆ 36/inclusion & exclusion-3/2020/ssw ದಿನಾಂಕ:12-3-2020ರಲ್ಲಿ ಎಲ್ಲಿಯೂ ಕರ್ನಾಟಕ ರಾಜ್ಯದ ಭೋವಿ, ಲಂಬಾಣಿ, ಕೊರಮ ಹಾಗೂ ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ತಿಳಿಸಿಲ್ಲ” ಎಂದು ಹೇಳಿದೆ.
“ಈ ಪತ್ರದಲ್ಲಿ ಈ ಜಾತಿಗಳನ್ನು ಕೈಬಿಡುವ ಬಗ್ಗೆ ರಾಜ್ಯ ಸರಕಾರ ಅಭಿಪ್ರಾಯ ಅಥವಾ ವಿವರಣೆಯನ್ನು ಕೇಳಿರುವುದೆ ವಿನಹ ಕೈಬಿಟ್ಟಿರುವುದಿಲ್ಲ.
ಮೊದಲನೆಯದು, ರಾಜ್ಯ ಸರ್ಕಾರವು NCSC ಕೇಳಿರುವ ಅಭಿಪ್ರಾಯ ಅಥವಾ ವಿವರಣೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಗುರುತಿಸಿದ ಮೂಲ ಪರಿಶಿಷ್ಟ ಜಾತಿಗಳಾದ ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯಲ್ಲಿ ಮುಂದುವರೆಸುವುದಾಗಿ ಸ್ಪಷ್ಟ ವಿವರಣೆ/ ಅಭಿಪ್ರಾಯವನ್ನು ರವಾನಿಸುವುದು.
ಎರಡನೆಯದು, ನ್ಯಾಯಾಲಯದಲ್ಲಿ ವಿಚಾರಣೆ ಮುಕ್ತಾಯಗೊಂಡಿದ್ದರು ಕೆಲವರು ‘ಸರ್ವೋಚ್ಚ ನ್ಯಾಯಾಲಯ ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಪಟ್ಟಿಯಿಂದಲೇ ಕೈಬಿಡುವಂತೆ ಆದೇಶ ನೀಡಿದೆ ಎಂದು ತಪ್ಪು ಮಾಹಿತಿಯನ್ನು ಹರಿಬಿಟ್ಟು ಸಮಾಜದಲ್ಲಿ ಸಂಘರ್ಷವನ್ನು ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಸರ್ಕಾರದಿಂದ ಸೂಕ್ತ ಕ್ರಮಕೈಗೊಳ್ಳುವ ಒತ್ತಡ ಮಾಡುವುದು” ಎಂದು ಸರ್ಕಾರ ಹೇಳಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭೋವಿ ಗುರು ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿಯವರು ಪ್ರತಿಕ್ರಿಯಿಸಿದ್ದು, ಮೇಲಿನ ಎಲ್ಲ ಕಾರಣಗಳಿಂದ ನಮ್ಮ ಮೀಸಲಾತಿ ಸಂರಕ್ಷಣೆ ಒಕ್ಕೂಟದಿಂದ ಕರೆ ನೀಡಿದ, ಪತ್ರ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದ್ದೇವೆ. ಭೋವಿ ಲಂಬಾಣಿ ಕೊರಮ ಕೊರಚ ಜಾತಿಗಳು ಜಾಗೃತಿಗೊಂಡು ಪ್ರತಿ ಮನೆಯಿಂದ ಪತ್ರ ಚಳುವಳಿಯಲ್ಲಿ ಭಾಗವಹಿಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಕರೆ ನೀಡಿದ್ದಾರೆ.
ಪತ್ರ ಚಳುವಳಿಯ ಮಾದರಿಯೊಂದನ್ನು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿ ಸಿದ್ಧಪಡಿಸಿದ್ದು, ಅದರಲ್ಲಿ ಈ ಕೆಳಗಿನ ಅಂಶಗಳು ಇರಲಿ ಎಂದು ಮನವಿ ಮಾಡಿದ್ದಾರೆ. ಬರೆದ ಪತ್ರವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ಕೋರಿದ್ದಾರೆ. ಅವರ ಪತ್ರದಲ್ಲಿ ಪ್ರಮುಖ ಅಂಶಗಳು ಇಲ್ಲಿವೆ:

  1. ಭೋವಿ, ಲಂಬಾಣಿ, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆಯಬೇಕೆಂದು ಕೆಲವರು ನಡೆಸುತ್ತಿರುವ ಸಂಚಿಗೆ ನಮ್ಮ ವಿರೋಧವಿದೆ.
  2. ಈ ಜಾತಿಗಳು ಅತಿ ಹಿಂದುಳಿದ ಜನಾಂಗ ಆಗಿದ್ದು ಇವುಗಳನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡುವ ಸಂಚಿಗೆ ತಾವು ಮನ್ನಣೆ ನೀಡಬಾರದು.
  3. ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರು ಮೂಲ ಸಂವಿಧಾನದಲ್ಲಿಯೇ ಈ ಜನಾಂಗಗಳಿಗೆ ಮೀಸಲಾತಿ ನೀಡಿದ್ದು ಕೆಲವರು ಮಾಡುತ್ತಿರುವ ಸಂಚನ್ನು ನಾವು ವಿರೋಧಿಸುತ್ತೇವೆ.
  4. ಎಲ್ಲಾ ಸಮುದಾಯಗಳಿಗೆ ನ್ಯಾಯವನ್ನು ನೀಡುವಂತಹ ನಿಮ್ಮಿಂದ ಲಂಬಾಣಿ, ಕೊರಚ, ಬೋವಿ, ಕೊರಮ ಜಾತಿಗಳಿಗೆ ಅನ್ಯಾಯವಾಗಬಾರದು.
  5. ಮೇಲಿನ ಸಮುದಾಯಗಳಿಗೆ ಸಿಕ್ಕಿರುವ ಮೀಸಲಾತಿ ಭಿಕ್ಷೆಯಲ್ಲ. ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ರವರು ನೀಡಿರುವ ಸಂವಿಧಾನಿಕ ಹಕ್ಕು. ಜೈ ಭೀಮ್.
    ಪರಿಶಿಷ್ಟ ಜಾತಿಯ ನೂರೊಂದು ಜಾತಿಗಳು ಅಣ್ಣತಮ್ಮಂದಿರು. ಒಗ್ಗಟ್ಟನ್ನು ಒಡೆಯುತ್ತಿರುವವರಿಗೆ ಮನ್ನಣೆ ನೀಡಬಾರದು. ಭೋವಿ ಲಂಬಾಣಿ ಕೊರಚ ಕೊರಮ ಮೂಲ ಎಸ್ಸಿ ಗಳು: ಹೀಗೆ ಪ್ರತಿಯೊಬ್ಬರು ಪತ್ರಗಳನ್ನು ಬರೆದು ಸರಕಾರದ ಗಮನ ಸೆಳೆಯಲು ಭೋವಿ ಗುರು ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿ ಮನವಿ ಮಾಡಿದ್ದಾರೆ.
Exit mobile version