ಶಿರಹಟ್ಟಿ ಕಟ್ಟಿಗೆ ಅಡ್ಡೆ ಪ್ರಕರಣ: ಡಿಸಿ ಆದೇಶಕ್ಕೂ ಕಿಮ್ಮತ್ತು ಕೊಡದ ಶಿರಹಟ್ಟಿ ತಹಶೀಲ್ದಾರ್..!

ಗದಗ: ಈಗಾಗಲೇ ನಿಮ್ಮ ಉತ್ತರಪ್ರಭ ಶಿರಹಟ್ಟಿಯಲ್ಲಿನ ಕಟ್ಟಿಗೆ ಅಡ್ಡೆಗಳ ಕುರಿತು ಹಾಗೂ ಅಧಿಕಾರಿಗಳ ನಡೆ ಕುರಿತು 6 ಸರಣಿ ಲೇಖನವನ್ನು ಪ್ರಕಟಿಸಿದೆ. ಆದರೆ ಇಂದು ತಹಶೀಲ್ದಾರರ ನಿರ್ಲಕ್ಷಕ್ಕೆ ಡಿಸಿ ಆದೇಶ ಕೈಗನ್ನಡಿಯಾಗಿದೆ. ಕಟ್ಟಿಗೆ ಅಡ್ಡೆಗಳ ವರದಿಗೆ ಜಿಲ್ಲೆಯ ಜನರಿಂದ ವ್ಯಾಪಕ ಮೆಚ್ಚುಗೆ ಹಾಗೂ ಬೆಂಬಲ ವ್ಯಕ್ತವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದಾಗಲೂ ಇಲ್ಲಿನ ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನವರ್ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ತೋರಿರುವುದು ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಸ್ವತಃ ಜಿಲ್ಲಾಧಿಕಾರಿಗಳೇ ಇಲ್ಲಿನ ಕಟ್ಟಿಗೆ ಅಡ್ಡೆಗಳನ್ನು ತೆರುವುಗೊಳಿಸುವ ಬಗ್ಗೆ ಆದೇಶ ನೀಡಿದರೂ ತಹಶೀಲ್ದಾರರಿಗೆ ಮಾತ್ರ ಡಿಸಿ ಆದೇಶದ ಬೆಲೆ ಗೊತ್ತಾದಂತೆ ಕಾಣುತ್ತಿಲ್ಲ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಡಿಸಿ ಆದೇಶದಲ್ಲೇನಿದೆ..?

ಈಗಾಗಲೇ 22-05-2019ರಂದು ಜಿಲ್ಲಾಧಿಕಾರಿಗಳು ಕಟ್ಟಿಗೆ ಅಡ್ಡೆ ಬಂದ್ ಮಾಡಿಸುವ ಕುರಿತು ತಹಶೀಲ್ದಾರರಿಗೆ ಆದೇಶ ನೀಡಿದ್ದಾರೆ. ಕಟ್ಟಿಗೆ ಅಡ್ಡೆಗಳಿಗೆ ಯಾವುದೇ ಅನುಮತಿ ಇಲ್ಲ. ವಸತಿ ಉದ್ದೇಶದಿಂದ ಬಿನ್ ಶೇತ್ಕಿಯಾದ ಜಮೀನಿನಲ್ಲಿ ವಾಣಿಜ್ಯ ಚಟುವಟಿಕೆಗೆ ಪಟ್ಟಣ ಪಂಚಾಯತಿಯಿಂದ ಯಾವುದೇ ಅನುಮತಿ ಇಲ್ಲ. ಜೊತೆಗೆ ಈ ಬಗ್ಗೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಹಶೀಲ್ದಾರರಿಗೆ ಆದೇಶಿಸಿದ್ದರು. ಇಷ್ಟಾದರೂ ಕೂಡ ಈವರೆಗೆ ತಹಶೀಲ್ದಾರರು ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಅಂದರೆ ಜಿಲ್ಲೆಯ ದಂಡಾಧಿಕಾರಿಗಳ ಆದೇಶಕ್ಕೂ ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನವರ್ ಮಹತ್ವ ನೀಡದಿರುವುದು ಪಟ್ಟಣದ ಜನರ ಅಚ್ಚರಿಗೆ ಕಾರಣವಾಗಿದೆ.

ಉತ್ತರಪ್ರಭಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಈಗಾಗಲೇ ಈ ಬಗ್ಗೆ ತಹಶೀಲ್ದಾರರಿಗೆ ಆದೇಶ ನೀಡಲಾಗಿದೆ. ಕೈಗೊಂಡ ಕ್ರಮದ ಬಗ್ಗೆ ತಹಶೀಲ್ದಾರರಿಂದ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.

ಮೇಲ್ನೋಟಕ್ಕೆ ಅಕ್ರಮದ ಬಗ್ಗೆ ಎಲ್ಲ ನಿಖರ ಮಾಹಿತಿ ಇದ್ದಾಗಲೂ ತಹಶೀಲ್ದಾರರು ಏಕೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಜನ ಮಾತಾಡಿಕೊಳ್ಳುವಂತಾಗಿದೆ. ಜಿಲ್ಲಾಧಿಕಾರಿಗಳು ಆದೇಶದ ನಂತರ ಶಿರಹಟ್ಟಿಯಲ್ಲಿನ ಕೆಲ ನಿವಾಸಿಗಳು ಕಟ್ಟಿಗೆ ಅಡ್ಡೆಗಳಿಂದಾಗುತ್ತಿರುವ ತೊಂದರೆಯ ಬಗ್ಗೆ ಮನವಿ ಸಲ್ಲಿಸಿದ್ದರು. ನಂತರ ಅರ್ಜಿದಾರರು ತಮ್ಮ ಮನವಿಯನ್ನು ಹಿಂಪೆಡೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಜಿಲ್ಲಾಧಿಕಾರಿಗಳ ಆದೇಶ ಪ್ರತಿ

ಈ ತಕರಾರು ಅರ್ಜಿಗೂ ಮೊದಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಸ್ಪಷ್ಟವಾಗಿ ಆದೇಶಿಸಿದ್ದಾರೆ. ನಂತರ ಸ್ವತಃ ತಹಶೀಲ್ದಾರರು ತಕರಾರು ಅರ್ಜಿ ಹಿಂಪಡೆದುಕೊಂಡ ಕಾರಣ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಸೂಚನೆ ನೀಡುತ್ತಾರೆ. ತಹಶೀಲ್ದಾರ ಸೂಚನೆಯ ನಂತರವೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕಟ್ಟಿಗೆ ಅಡ್ಡೆಗಳ ಅಕ್ರಮದ ಬಗ್ಗೆ ತಹಶೀಲ್ದಾರರಿಗೆ ಮಾಹಿತಿ ನೀಡುತ್ತಾರೆ. ಇಷ್ಟೆಲ್ಲ ಆದರೂ ತಹಶೀಲ್ದಾರರು ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಇರದಲ್ಲಿ ತಹಶೀಲ್ದಾರರ ಹಿತಾಸಕ್ತಿ ಏನು? ಎಂದು ಜನ ಕೇಳುತ್ತಿದ್ದಾರೆ.

Exit mobile version